

ಮೈಸೂರು: ಸತ್ಯಾನ್ವೇಷಣಮ್ ಕೃತಿಯಲ್ಲಿ ವಿದ್ವಾಂಸರಾದ ಕೆ.ಎಸ್.ವರದಾಚಾರ್ಯರ ವಿಶಿಷ್ಟ ಲೇಖನಗಳ ಸಂಗ್ರಹವಿದ್ದು, ಅವರ ವಿದ್ವತ್‌ಪೂರ್ಣ ಪಾಂಡಿತ್ಯವನ್ನು ಈ ಲೇಖನಗಳಲ್ಲಿ ಕಾಣಬಹುದು ಎಂದು ಕೃತಿಯ ಪ್ರಧಾನ ಸಂಪಾದಕರೂ ಅದ ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜರಾವ್ ಬಣ್ಣಿಸಿದರು.
ಪಂಡಿತರತ್ನಂ ಕೆ.ಎಸ್.ವರದಾಚಾರ್ಯ ಶತಮಾನೋತ್ಸವ ಸಮಿತಿಯಿಂದ ನಗರದ ಸರ್ಕಾರಿ ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ವದ್ಗೋಷ್ಠಿ ಮತ್ತು ಸತ್ಯಾನ್ವೇಷಣಮ್ ದ್ವಿತೀಯ ಸಂಸ್ಮರಣ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಗ್ರಂಥ ಕುರಿತು ಮಾತನಾಡಿದರು.
ಕೆ.ಎಸ್.ವರದಾಚಾರ್ಯರು ವಿಷಯಗಳ ಆಳವಾದ ಅರಿವು ಪಡೆದು ವಿಚಾರ ಮಂಡಿಸುತ್ತಿದ್ದರು. ಅವರ ಬರಹ, ಆಲೋಚನೆಗಳು ಎಲ್ಲವನ್ನೂ ಒಳಗೊಳ್ಳುತ್ತಿತ್ತು. ರಾಮಾಯಣ ಕುರಿತ ಅವರ ಟೀಕೆಯೂ ಅತ್ಯಂತ ಮಹತ್ವದ್ದಾಗಿ ನಿಲ್ಲುತ್ತದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ವರದಾಚಾರ್ಯರ ವಿದ್ವತ್, ಅವರ ಬರಹಗಳನ್ನು ತಿಳಿದುಕೊಳ್ಳಲು ಈ ಗ್ರಂಥ ಸಹಕಾರಿಯಾಗಿದೆ. ಅವರ ಜ್ಞಾನ, ವಿದ್ವತ್ತಿನ ಬಗ್ಗೆ ಪೂರ್ಣ ಅರಿವಿದ್ದು, ಸದಾ ಗೌರವಿಸುತ್ತಿದ್ದೆ ಎಂದರು.
ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಗ್ತಂಥ ಬಿಡುಗಡೆ ಮಾಡಿ, ಆಶೀರ್ವಚನ ನೀಡಿದರು. ಸರ್ಕಾರಿ ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪಿ.ಸತ್ಯನಾರಾಯಣ ಮಾತನಾಡಿದರು. ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಇ.ದೇವನಾಥನ್ ಅಧ್ಯಕ್ಷತೆ ವಹಿಸಿದ್ದರು.
ನಗರ ಹಾಗೂ ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಸಮಿತಿ ಕಾರ್ಯಾಧ್ಯಕ್ಷ ಬಿ.ವಿ.ಇಳೈ ಆಳ್ವಾರ್ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ವಿದ್ವಾನ್ ಹೇರಂಬ ಆರ್.ಭಟ್, ಪ್ರಮುಖರಾದ ಟಿ.ವಿ.ಸತ್ಯನಾರಾಯಣ, ಜಿ.ಎಂ.ಹೆಗಡೆ ಇದ್ದರು.