ಪಂಜಾಬ್‍ನಲ್ಲಿ ಅಮರ ಬಲಿದಾನ ದಿನಾಚರಣೆ

Jai Bharata Mata Seva Samiti - Copy
Published on

ಬೀದರ್: ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿ ವತಿಯಿಂದ ಮಾ. 23 ರಂದು ಬೆಳಿಗ್ಗೆ 11ಕ್ಕೆ ಪಂಜಾಬ್- ಪಾಕಿಸ್ತಾನ್ ಗಡಿಯಲ್ಲಿನ ಖಟಕರ್ ಕಲನ್ ರೋಡ್‍ನ ಶಹೀದ್-ಎ-ಆಝಂ ಭಗತ್‍ಸಿಂಗ್ ಮ್ಯೂಸಿಯಂ ಸಮೀಪ ಅಮರ ಬಲಿದಾನ ದಿನಾಚರಣೆ ನಡೆಯಲಿದೆ.
ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ಸಮಿತಿ ಸದಸ್ಯರು ಹಾಗೂ ದೇಶ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದ್ದಾರೆ.
ಅಮರ ಬಲಿದಾನ ದಿನಾಚರಣೆ ಪ್ರಯುಕ್ತ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಆಳಂದದ ಜೈ ಭಾರತ ಮಾತಾ ಮಂದಿರದಿಂದ ಆರಂಭಗೊಂಡ ದೇಶ ಭಕ್ತರ ಯಾತ್ರೆ ಕಲಬುರಗಿ, ಹುಮನಾಬಾದ್, ಬಸವಕಲ್ಯಾಣ, ಉಮ್ಮರ್ಗಾ, ತುಳಜಾಪುರ, ಸೋಲಾಪುರ, ಶಿರಡಿ, ಮಧ್ಯಪ್ರದೇಶದ ಉಜ್ಜಯನಿ, ಮಹಾಕಾಲ, ಜೈಪುರ, ರಾಜಸ್ತಾನ್, ಹರಿಯಾಣ ಮಾರ್ಗವಾಗಿ ಪಂಜಾಬ್‍ಗೆ ಹೊರಟಿದೆ ಎಂದು ಹೇಳಿದ್ದಾರೆ.
ಯಾತ್ರೆ ದೇಶ ಭಕ್ತಿ, ದೇಶಾಭಿಮಾನ ಜಾಗೃತಗೊಳಿಸಿದೆ. ಮಾರ್ಗ ಮಧ್ಯದಲ್ಲಿ ದೇಶ ಭಕ್ತರು ಸಿಡಿಮದ್ದು ಸಿಡಿಸಿ, ಜೆಸಿಬಿ ಮೂಲಕ ಹೂಮಳೆ ಸುರಿಸಿ ಯಾತ್ರೆಗೆ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯ ಯೋಧರ ಕುಟುಂಬಕ್ಕೆ ಸತ್ಕಾರ: ಅಮರ ಬಲಿದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಸ್ವಾತಂತ್ರ್ಯ ಯೋಧರ ಕುಟುಂಬ ವರ್ಗದವರನ್ನು ಸನ್ಮಾನಿಸಲಾಗುತ್ತಿದೆ ಎಂದು ಪಪ್ಪು ಪಾಟೀಲ ಖಾನಾಪುರ ತಿಳಿಸಿದ್ದಾರೆ. ಚಂದ್ರಶೇಖರ ಆಜಾದ್ ಕುಟುಂಬದ ಅಮಿತ್ ಆಝಾದ್ ತಿವಾರಿ, ಭಗತ್‍ಸಿಂಗ್ ಕುಟುಂಬದ ಯದುವೀರಸಿಂಗ್, ರಾಜಗುರು ಕುಟುಂಬದ ಸತ್ಯಶೀಲ ರಾಜಗುರು, ಸುಖದೇವ್ ಕುಟುಂಬದ ಅಶೋಕ ಥಾಪರ್, ಆಷಾಖುಲ್ ಖಾನ್ ಕುಟುಂಬದ ಆಲಾಖ್ ಉಲ್ಲಾಖಾನ್, ಉಧಮ್ ಸಿಂಗ್ ಕುಟುಂಬದ ಹರ್ಪಲ್ ಸಿಂಗ್ ಸುಮನ್, ರಾಣಿ ಲಕ್ಷ್ಮೀಬಾಯಿ ಕುಟುಂಬದ ಸುನೀಲ್ ಗೋಪಾಲರಾವ್, ಸಂಗೊಳ್ಳಿ ರಾಯಣ್ಣ ಕುಟುಂಬದ ಕರವೀರಪ್ಪ, ಕಿತ್ತೂರು ರಾಣಿ ಚನ್ನಮ್ಮ ಕುಟುಂಬದ ಸೋಮಶೇಖರ ದೇಸಾಯಿ ಅವರನ್ನು ಗೌರವಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net