

ದೇವರಹಿಪ್ಪರಗಿ: ಗ್ರಾಮದಲ್ಲಿ ನೀರು ಪೂರೈಕೆ, ಚರಂಡಿ ವ್ಯವಸ್ಥೆ, ಸಮರ್ಪಕ ವಿದ್ಯುತ್ ಸರಬರಾಜು ಹಾಗೂ ಮೂಲಸೌಲಭ್ಯಗಳಿಗಾಗಿ ಆಗ್ರಹಿಸಿ ಮಹಿಳೆಯರು, ಗ್ರಾಮಸ್ಥರು ಪಂಚಾಯಿತಿಗೆ ಬೀಗ ಹಾಕಿ, ಖಾಲಿ ಕೊಡಗಳೊಂದಿಗೆ ಧರಣಿ ಕುಳಿತು ಪ್ರತಿಭಟಿಸಿದರು.
ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಸಾರ್ವಜನಿಕರು ಸಮರ್ಪಕ ಕುಡಿಯುವ ನೀರು, ವಿದ್ಯುತ್ ಪೂರೈಕೆಯಿಲ್ಲದೆ ತೊಂದರೆಗೆ ಒಳಗಾಗಿದ್ದು, ಪೂರೈಸಲು ಆಗ್ರಹಿಸಿದರು.
ಭುವನೇಶ್ವರಿ ನಾಟೀಕಾರ, ಅಂಜುಮಾ ಪಠಾಣ ಮಾತನಾಡಿ, ಗ್ರಾಮದಲ್ಲಿ ಕಳೆದ 10 ದಿನಗಳಿಂದ ನೀರು ಪೂರೈಕೆಯಿಲ್ಲ. ಮೊದಲು ನಲ್ಲಿಯ ನೀರು ಸರಿಯಾಗಿ ಬರುತ್ತಿತ್ತು. ಈಗ ಜೆಜೆಎಂ ಕಾಮಗಾರಿಯಿಂದ ಸಮರ್ಪಕ ನೀರು ಬರುತ್ತಿಲ್ಲ. ಗ್ರಾಮದ ಬಹುತೇಕ ಮಹಿಳೆಯರಿಗೆ ಬೆಳಗಿನಿಂದ ಸಂಜೆಯವರೆಗೆ ಕೃಷಿ ಕಾರ್ಯಗಳಿಗೆ ತೆರಳುವುದು, ಸಂಜೆ ನೀರಿಗಾಗಿ ಸುತ್ತಮುತ್ತಲಿನ ಜಮೀನುಗಳಿಗೆ ಅಲೆಯುವುದೇ ಕೆಲಸವಾಗಿದೆ. ಇನ್ನು ವೃದ್ಧರು ಯುವಕರಿಗೆ ಹಣ ನೀಡಿ ನೀರು ತರಿಸಿಕೊಳ್ಳುವ ಪರಿಸ್ಥಿತಿ ಇದೆ. ಈ ಕುರಿತು ಪಂಚಾಯಿತಿ ಪಿಡಿಒ ಅವರಿಗೆ ಸಮಸ್ಯೆ ಹೇಳಬೇಕೆಂದರೆ ಅವರು ಒಂದು ತಿಂಗಳು ರಜೆಯಲ್ಲಿ ಇದ್ದಾರೆ. ಗ್ರಾಮದ ಪಂಚಾಯಿತಿ ಸದಸ್ಯರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಚರಂಡಿಗಳು ತುಂಬಿಕೊಂಡು ದುರ್ನಾತ ಬೀರುತ್ತಿವೆ. ಸ್ವಚ್ಛ ಮಾಡುವ ಕಾರ್ಮಿಕರಿಗೆ 2 ವರ್ಷದಿಂದ ಸರಿಯಾಗಿ ಸಂಬಳ ನೀಡದ ಹಿನ್ನೆಲೆಯಲ್ಲಿ ಅವರೂ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ಈ ಎಲ್ಲ ಕೊರತೆಗಳನ್ನು ನೀಗಿಸಿ ನಮಗೆ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಸಾಕಷ್ಟು ಬಾರಿ ಮನವಿ ಮಾಡಿದರೂ ಕೇಳದ ಮಹಿಳೆಯರು ಮೇಲಧಿಕಾರಿಗಳೇ ಬಂದು ನಮ್ಮ ಬೇಡಿಕೆಗೆ ಉತ್ತರಿಸುವವರಿಗೆ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಒಂದು ಹಂತದಲ್ಲಿ ಕೈ-ಕೈ ಮೀಲಾಯಿಸುವ ಪರಿಸ್ಥಿತಿಗೆ ಉಂಟಾಯಿತು. ಅಂತಿಮವಾಗಿ ತಾಲೂಕು ಪಂಚಾಯಿತಿ ಇಒ ಸುನೀಲ ಮದ್ದೀನ ಸ್ಥಳಕ್ಕೆ ಆಗಮಿಸಿ ಮಹಿಳೆಯರು ಹಾಗೂ ಸಾರ್ವಜನಿಕರ ಅಹವಾಲು ಆಲಿಸಿ ಕೂಡಲೇ ಬೇರೊಬ್ಬ ಪಿಡಿಓ ಅವರನ್ನು ನೇಮಿಸಿ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಭರವಸೆ ನೀಡಿದ ನಂತರ ಪಂಚಾಯಿತಿ ಬೀಗ ತೆರವುಗೊಳಿಸಲಾಯಿತು.
ಹಜರತ್‌ಬೀ ಇನಾಮದಾರ, ಸೋನಾಬಾಯಿ ವಡ್ಡರ, ಮಲ್ಲವ್ವ ಕೋರಿ, ನಾಗಮ್ಮ ಕೌಳೆ, ಮೀರಾಬಾಯಿ ಮಕಾಂದಾರ, ಬಶೀರಾ ಇನಾಮದಾರ, ಶಹನಾಜ್ ನಂದ್ಯಾಳ, ಅಂಬಕ್ಕ ಬಮ್ಮನಳ್ಳಿ, ಕಮಲಾಬಾಯಿ ನಾವಿ, ಸುಗಲಾಬಾಯಿ ಮಠಪತಿ, ಶಾಂತಾಬಾಯಿ ಹಿಟ್ನಳ್ಳಿ, ಕಸ್ತೂರಿಬಾಯಿ ಹಾದಿಮನಿ, ರೇಣುಕಾ ಮಾದರ, ಮಲ್ಲಮ್ಮ ತಳವಾರ, ಯಲ್ಲವ್ವ ಹರಿಜನ, ಗಂಗಾಬಾಯಿ ಹರಿಜನ, ಭಾರತಿ ಸೊನ್ನಹಳ್ಳಿ, ರೇಖಾ ಹರಿಜನ ಇತರರಿದ್ದರು.
ಜೆಜೆಎಂ ಕಾಮಗಾರಿ ಸರಿಯಾಗಿ ಆಗದೆ ಇರುವುದರಿಂದ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪೈಪ್ ಒಡೆದು ನೀರು ಸೋರುತ್ತಿವುದನ್ನು ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ನೀರು ಕೊಡಲು ವ್ಯವಸ್ಥೆ ಮಾಡುತ್ತೇನೆ. ಸುನೀಲ ಮದ್ದಿನ, ತಾಪಂ ಇಒ, ದೇವರಹಿಪ್ಪರಗಿ