

ಚಿತ್ತಾಪುರ: ಗುದುಗಿನ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿದ ಹಾನಗಲ್ನ ಶ್ರೀ ಪಂಚಾಕ್ಷರಿ ಗವಾಯಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು. ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿ ರಾಜ್ಯ ಸರ್ಕಾರದಿಂದ ಆಚರಿಸಲು ಅಧಿಕೃತ ಘೋಷಣೆ ಮಾಡಬೇಕು ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯ ಅಜ್ಜ ಅವರು ಒತ್ತಾಯಿಸಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ನಿಂದ ಭಾನುವಾರ ಹಮ್ಮಿಕೊಂಡಿದ್ದ ಗಾನಯೋಗಿ ಸಂಗೀತೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪರಿಷತ್ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಂಚರಿಸಿ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿದೆ, ಅಲ್ಲದೆ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ಲಾಘಿಸಿದರು.
ಸಂಗೀತ, ಸಾಹಿತ್ಯಕ್ಕೆ ಜಾತಿಯೇ ಇಲ್ಲ. ಪ್ರತಿಯೊಬ್ಬರೂ ಕಲೆಯನ್ನು ಉಳಿಸಿ, ಬೆಳೆಸಲು ಶ್ರಮಿಸುತ್ತಿದ್ದಾರೆ. ಸಂಗೀತ, ನಾಟ್ಯ, ನೃತ್ಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಆದರೆ ಕಲಾವಿದರಿಗೆ ಮಾತ್ರ ಕಿಂಚಿತ್ತು ಮರ್ಯಾದೆ ಸಿಗುತ್ತಿಲ್ಲ, ಸಂಗೀತಗಾರರಿಗೆ ಸರ್ಕಾ ರಿ ಕೆಲಸ ಕೊಡುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಪುರಸಭೆ ಅಧ್ಯಕ್ಷ ಮಲ್ಲಿಕಾಜರ್ುನ ಕಾಳಗಿ ಮಾತನಾಡಿ, ತಾಲೂಕು ಪರಿಷತ್ ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಅಖಿಲ ಕರ್ನಾಟಕ ಗಾನ ಸಂಗೀತ ಪರಿಷತ್ ಅಧ್ಯಕ್ಷ ಚನ್ನವೀರಯ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ರಂಗಭೂಮಿ ಕಲಾವಿದ ಶಿವಣ್ಣ ಹಿಟ್ಟಿನ್, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ ಮಾತನಾಡಿದರು. ಭಕ್ತರಿಂದ ಶ್ರೀ ಕಲ್ಲಯ್ಯ ಅಜ್ಜ ಅವರಿಗೆ ತುಲಭಾರ ನಡೆಯಿತು. ಪರಿಷತ್ ತಾಲೂಕು ಅಧ್ಯಕ್ಷೆ ಶ್ವೇತಾ ಪಾಟೀಲ್ ಅಧ್ಯಕ್ಷತೆವಹಿಸಿದ್ದರು.
ಪುರಸಭೆ ಸದಸ್ಯ ಶ್ಯಾಮ್ ಮೇಧಾ, ಪರಿಷತ್ ಉಪಾಧ್ಯಕ್ಷ ರೇವಣಸಿದ್ದಯ್ಯ ಸ್ವಾಮಿ, ಪ್ರಮುಖರಾದ ಗುರುಲಿಂಗಯ್ಯಸ್ವಾಮಿ ಪುರದಯ್ಯನಮಠ, ಚಂದ್ರಶೇಖರ ಉಟಗೂರ, ರಾಜಶೇಖರ ಬಳ್ಳಾ, ಶ್ರುತಿ ತಾವರೆ, ಸೂರ್ಯಕಾಂತ ಹಂಗನಳ್ಳಿ, ಸಿದ್ದಲಿಂಗಮ್ಮ ಸ್ಥಾವರಮಠ, ನಾನಾಗೌಡ ಬೆಣ್ಣೂರಕರ್, ಗುರುಣ್ಣ ಬೊಮ್ಮನಳ್ಳಿ, ರೇವಣಸಿದ್ದಪ್ಪ ರೋಣದ ಇತರರಿದ್ದರು.
ಸಂಗಮೇಶ ರೋಣದ್ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಣೆ ಮಾಡಿದರು.
ಹಲವು ಕಲಾವಿದರ ಸಮ್ಮಿಲನ: ಸಂಗೀತೋತ್ಸವ ಕಾರ್ಯಕ್ರಮ ಸಾಕಷ್ಟು ಕಲಾವಿದರಿಗೆ ವೇದಿಕೆ ನೀಡಿದಂತಾಯಿತು. ಕಲಾವಿದರಾದ ಅಣ್ಣಾರಾವ ಮತ್ತಿಮಡು, ಪಾರ್ಥಸಾರಥಿ ಹಿರೇಮಠ, ವಿನಯಕುಮಾರ ಶಿಲ್ಪಿ, ಕಲ್ಯಾಣರಾವ ಭಂಟನಳ್ಳಿ, ಶಿವಗಂಗಾ ಭಜಂತ್ರಿ, ದೀಪಕ ಸಿಂಪಿ, ದೇವಿಂದ್ರಪ್ಪ ಬಳಬಾ, ಸಿದ್ದಲಿಂಗ ಶೆಳ್ಳಗಿ, ಲಕ್ಷ್ಮಣ ಭಜಂತ್ರಿ, ರಾಜಶೇಖರಸ್ವಾಮಿ, ಬಸಯ್ಯಸ್ವಾಮಿ, ಮಡಿವಾಳ ಕಳಸ್ಕರ್, ನಿಜಲಿಂಗಪ್ಪ ಶೆಳ್ಳಗಿ, ಶಾಂತಕುಮಾರ ಮಠಪತಿ ಸೇರಿ ಹಲವರು ಸಂಗೀತ ಸೇವೆ ಸಲ್ಲಿಸಿ ಗಮನ ಸೆಳೆದರು.
ಗದಗದ ಆಶ್ರಮಕ್ಕೆ ಹಣ, ಆಸ್ತಿ ಬೇಕಿಲ್ಲ. ನಿಮಗೆ ಸಾಕಲು ಆಗದ ಕಣ್ಣಿಲ್ಲದ ಮಗುವಿಗೆ ತಂದು ಬಿಡಿ, ನಾವು ಪೋಷಣೆ ಮಾಡುತ್ತೇವೆ. ಸಂಗೀತ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಿದೆ. ಹೀಗಾಗಿ ಸರ್ಕಾರದಿಂದಲೇ ಪೂಜ್ಯರ ಜಯಂತಿ ಆಚರಿಸಬೇಕು. ಈ ಬಗ್ಗೆ ವಿಳಂಬ ಅನುಸರಿಸಿದರೆ ಹೋರಾಟ ಮಾಡಬೇಕಾಗುತ್ತದೆ.
| ಶ್ರೀ ಕಲ್ಲಯ್ಯ ಅಜ್ಜ, ವೀರೇಶ್ವರ ಪುಣ್ಯಾಶ್ರಮ, ಗದಗ