

ನೆಲಮಂಗಲ
ರಾಜ್ಯ ಜೆಡಿಎಸ್ ಪ್ರಚಾರ ಸಮಿತಿ ಸದಸ್ಯ ಡಾ.ಎಲ್.ಕೃಷ್ಣಮೂರ್ತಿ ಹಾಗೂ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಪರ ಸೋಮವಾರ ಬೃಹತ್ ಬೈಕ್ ರ‌್ಯಾಲಿ ನಡೆಸಲಾಯಿತು.
ಯಂಟಗಾನಹಳ್ಳಿ ಗ್ರಾಪಂನ ಹಂಚೀಪುರದ ಶಾಸಕರ ಕಚೇರಿ ಬಳಿ ಸಮಾವೇಶಗೊಂಡ ನೂರಾರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಗರದಾದ್ಯಂತ ಬೈಕ್ ಮೂಲಕ ಸಂಚರಿಸುವ ಮೂಲಕ ಗಮನ ಸೆಳೆದರು.
ಡಾ.ಎಲ್.ಕೃಷ್ಣಮೂರ್ತಿ ಮಾತನಾಡಿ, ಪಂಚರತ್ನ ಯೋಜನೆಯನ್ನು ಕಂಡು ಅನ್ಯ ಪಕ್ಷದವರಿಗೆ ನಡುಕ ಹುಟ್ಟಿದೆ. ಯೋಜನೆಯ ಪರಿಕಲ್ಪನೆಯನ್ನು ಜನರು ಅರ್ಥೈಸಿಕೊಂಡು ಈ ಬಾರಿ ಸದೃಢ ರಾಜ್ಯ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಾಕ್ಷಿಯಾಗಬೇಕಿದೆ ಎಂದರು. ಪಕ್ಷದ ವರಿಷ್ಠ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸಾಧನೆಯನ್ನು ಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಜೆಡಿಎಸ್ ಬೆಂಬಲಿಸಬೇಕಿದೆ. ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಅವರು ವಿದ್ಯಾವಂತರು, ಹೆಚ್ಚಿನದಾಗಿ ಸ್ಥಳೀಯ ವ್ಯಕ್ತಿಯಾಗಿದ್ದು, ಜನರ ಕಷ್ಟಕ್ಕೆ ಸ್ಪಂದಿಸುವ ಅವರನ್ನು ಆಯ್ಕೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲೆಡೆ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಸ್ಥಳೀಯರಾಗಿದ್ದು, ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿದ್ದು, ಕ್ಷೇತ್ರದ ಪರಿಚಯ ಸಾಕಷ್ಟಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರದಲ್ಲಿ ಇಲ್ಲದಿದ್ದರೂ ಕ್ಷೇತ್ರದಾದ್ಯಂತ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದರು. ಹಣದಿಂದ ಮತದಾರರನ್ನು ಖರೀದಿಸಬಹುದು ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ. ಮತದಾರರು ಜೆಡಿಎಸ್ ಪರ ಇದ್ದು, ಅವರ ನಂಬಿಕೆಗೆ ಧಕ್ಕೆ ಬಾರದ ರೀತಿ ಡಾ.ಕೆ.ಶ್ರೀನಿವಾಸಮೂರ್ತಿ ನಡೆದುಕೊಳ್ಳಲಿದ್ದಾರೆ ಎಂದರು.
ಡಾ.ಕೆ.ಶ್ರೀನಿವಾಸಮೂರ್ತಿ ಅವರಿಗೆ ಸಿಗುತ್ತಿರುವ ಬೆಂಬಲ ನೋಡಿ ಕಾಂಗ್ರೆಸ್, ಬಿಜೆಪಿಯ ಅಭ್ಯರ್ಥಿಗಳಲ್ಲಿ ಆತಂಕ ಶುರುವಾಗಿದ್ದು, ಜೆಡಿಎಸ್ ಅಭ್ಯರ್ಥಿ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹರಿ ಬಿಡುತ್ತಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿ ಬಂದರೆ ಜನರು ಸೋಲಿಸಿ ಮನೆಗೆ ಕಳುಹಿಸುತ್ತಾರೆ. ಹೀಗಿರುವಾಗ ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್, ಬಿಜೆಪಿನ ಹೊರಗಿನ ಅಭ್ಯರ್ಥಿಗಳಿಗೆ ತಾಲೂಕಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜೆಡಿಎಸ್ ಕಾರ್ಯಾಧ್ಯಕ್ಷ ಬೂದಿಹಾಳ್‌ರಾಜು, ಉಪಾಧ್ಯಕ್ಷ ಹನುಮಂತರಾಜು, ಕಸಬಾ ಹೋಬಳಿ ಅಧ್ಯಕ್ಷ ಕೆಂಪರಾಜು, ನಗರಸಭೆ ಸದಸ್ಯ ಎನ್.ಗಣೇಶ್, ಸದಸ್ಯರಾದ ಕೆ.ಎಂ.ಶಿವಕುಮಾರ್, ಆಂಜಿನಪ್ಪ, ಸುನೀಲ್‌ಮೂಡ್, ಪರಸಭೆ ಮಾಜಿ ಅಧ್ಯಕ್ಷ ಸೀತಾರಾಮ್, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ವರದನಾರಾಯಣ್, ಮೈಕ್ ಶಿವಣ್ಣ, ಪುಟ್ಟಬೈಲೆಗೌಡ, ದೇಗನಹಳ್ಳಿಸುರೇಶ್, ಶಿವಕುಮಾರ್, ಹನುಮಂತರಾಜು, ಶೇಖರ್‌ಗೌಡ, ರಮೇಶ್, ಶರ್ಮಾ, ಯ.ಉಮೇಶ್, ಮಂಜುನಾಥ್, ಲೋಕೇಶ್‌ಗೌಡ, ಕೃಷ್ಣ, ರಮೇಶ್, ವಕೀಲನಾಗೇಂದ್ರ ಉಪಸ್ಥಿತರಿದ್ದರು.