ಕಾರಂಗುಟ್ಟೆನಾರಾಯಣಸ್ವಾಮಿ ಕೋಲಾರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಕೋಲಾರದಲ್ಲಿ ಜೆಡಿಎಸ್ ರಣತಂತ್ರ ಬದಲಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಸಿಎಂಆರ್ ಶ್ರೀನಾಥ್ ‘ಹುಲಿಯಾ’ಗೆ ಎದುರಾಳಿಯಾಗಲಿದ್ದು, ಬಿಜೆಪಿಯಿಂದ ‘ಹುಲಿ’ ಮಾಜಿ ಸಚಿವ ವರ್ತೂರು ಆರ್. ಪ್ರಕಾಶ್ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಸಿಎಂಆರ್ ಶ್ರೀನಾಥ್ ಬೆನ್ನಿಗೆ ಎಚ್.ಡಿ. ಕುಮಾರಸ್ವಾಮಿ ನಿಂತಿದ್ದು, ತಾನೇ ಅಭ್ಯರ್ಥಿ ಎಂಬಂತೆ ಚುನಾವಣೆ ನಡೆಸಲಿರುವುದರಿಂದ ಕಣ ರಂಗೇರುವುದು ನಿಶ್ಚಿತವಾಗಿದೆ.
ಸಿದ್ದರಾಮಯ್ಯ ಕೋಲಾರ ಪರ್ಯಟನೆಗೂ ಮುನ್ನ ನ.1ರಂದು ಮುಳಬಾಗಿಲಿನಲ್ಲಿ ಆಯೋಜಿಸಿದ್ದ ಜೆಡಿಎಸ್‌ನ ಪಂಚರತ್ನ ಮತ್ತು ಗ್ರಾಮವಾಸ್ತವ್ಯಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಘೋಷಣೆ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅಂದು ಕಾರ್ಯಕ್ರಮ ಮಳೆಗೆ ಆಹುತಿಯಾದ ಹಿನ್ನೆಲೆಯಲ್ಲಿ ನ.18ರಂದು ಮತ್ತೆ ಆಯೋಜಿಸಿರುವ ಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಘೋಷಣೆ ಮಾಡಬಹುದೆಂದು ಹೇಳಲಾಗುತ್ತಿತ್ತಾದರೂ ಹಿಂದಿನ ದಿನ(ನ.17)ವೇ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ಕೋಲಾರ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಎಂದು ಘೋಷಣೆ ಮಾಡಿರುವುದು
ರಾಜಕೀಯ ವಲಯದಲ್ಲಿ ಹಲವರ ಹುಬ್ಬೇರಿಸುವಂತೆ ಮಾಡಿದೆ.
ಕೋಲಾರದಲ್ಲಿ ಮುಸ್ಲಿಮರ 51 ಸಾವಿರ ಮತಗಳಿರುವುದರಿಂದ ಜೆಡಿಎಸ್ ಸಿ.ಎಂ. ಇಬ್ರಾಹಿಂ ಅವರನ್ನು ಕಣಕ್ಕಿಳಿಸಲಿದೆ. ಅವರಿಲ್ಲದಿದ್ದರೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ರೆಕ್ಕೆಪುಕ್ಕ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇನ್ನು ಸ್ಥಳೀಯವಾಗಿ ಜೆಡಿಎಸ್‌ನಿಂದ ಪಕ್ಷದ ತಾಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ, ಒಕ್ಕಲಿಗರ ಸಂ ನಿರ್ದೇಶಕ ಡಾ.ರಮೇಶ್, ಕಾಂಗ್ರೆಸ್‌ನ ಬ್ಯಾಲಹಳ್ಳಿ ಗೋವಿಂದಗೌಡ ಅವರ ಹೆಸರುಗಳಿದ್ದವು. ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಬಹುದೆಂಬ ಕುತೂಹಲ ಮನೆ ಮಾಡಿತ್ತು. ಆದರೆ ಇದಕ್ಕೆಲ್ಲ ತೆರೆ ಎಳೆದಿರುವ ದಳಪತಿ ಮುಸ್ಲಿಂ ಮತಬುಟ್ಟಿಗೆ ಕೈಹಾಕಬಲ್ಲ ಟೊಮಾಟೊ ವ್ಯಾಪಾರಿ ಒಕ್ಕಲಿಗ ಸಮುದಾಯದ ಸಿಎಂಆರ್ ಶ್ರೀನಾಥ್‌ಗೆ ಅಳೆದೂ ತೂಗಿ ಮಣೆ ಹಾಕಿರುವುದರ ಹಿಂದೆ ಮತಗಳಿಕೆಯ ಪಕ್ಕಾ ಲೆಕ್ಕಾಚಾರ ಅಡಗಿದೆ ಎನ್ನಲಾಗುತ್ತಿದೆ.
ಕೋಲಾರ ಕ್ಷೇತ್ರದಲ್ಲಿ 2.3 ಲಕ್ಷ ಮತಗಳಿದ್ದು, 45 ಸಾವಿರ ಒಕ್ಕಲಿಗರು, 60 ಸಾವಿರ ದಲಿತರು, 28 ಸಾವಿರ ಕುರುಬ ಮತ್ತು 30 ಸಾವಿರ ಇತರ ಹಿಂದುಳಿದವರ ಮತಗಳಿವೆ. ಶ್ರೀನಾಥ್‌ಗೆ ಒಕ್ಕಲಿಗರ ಮತಗಳು ಸಾರಾಸಗಟಾಗಿ ಬೀಳಲಿದ್ದು, ಅರ್ಧದಷ್ಟು ಮುಸ್ಲಿಂ, ದಲಿತರು, ಇತರ ಹಿಂದುಳಿದವರ ಮತ ಪಡೆದು ಗೆಲುವು ಸಾಧಿಸಬಹುದೆಂಬ ಪಕ್ಕಾ ಲೆಕ್ಕಾಚಾರ ದಳಪತಿಗಳದು. ಇನ್ನು ಸಿದ್ದರಾಮಯ್ಯ ಮತ್ತು ವರ್ತೂರು ಆರ್.ಪ್ರಕಾಶ್ ಕುರುಬ ಸವಾಜದವರಾಗಿದ್ದು, ಸಿದ್ದರಾಮಯ್ಯ ನೆಚ್ಚಿಕೊಂಡಿರುವ ಕುರುಬರ ಮತಗಳು ವಿಭಜನೆಯಾಗುವುದು ಖಚಿತವಾಗಿದ್ದು, ಬಿಜೆಪಿ ಸಾಂಪ್ರದಾಯಿಕ ಮತಗಳಷ್ಟೇ ವರ್ತೂರು ಆರ್. ಪ್ರಕಾಶ್‌ಗೆ ಬೀಳಲಿವೆ. ಸಿದ್ದರಾಮಯ್ಯ ಹೊರಗಿನವರಾಗಿದ್ದು, ಅವರನ್ನು ಕರೆತಂದಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ, ಶಾಸಕರಾದ ಕೆ.ವೈ. ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಅವರವರ ಕ್ಷೇತ್ರಗಳಿಂದ ಪ್ರಚಾರಕ್ಕೆ ಹೊರಹೋಗದಂತೆ ಕಟ್ಟಿಹಾಕುವ ತಂತ್ರ ಅನುಸರಿಸಿದರೆ ಕಾಂಗ್ರೆಸ್ ಮತಗಳಿಕೆ ಕುಸಿಯುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸ್ಟೀರಿಂಗ್ ಸಮಿತಿ ಸದಸ್ಯ ಕೆ.ಎಚ್.ಮುನಿಯಪ್ಪ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ ಕಾರಣ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದರೆ ದಲಿತರ ಮತಗಳು ಕೈತಪ್ಪುತ್ತವೆ. ಅದೇ ರೀತಿ ಕೆ.ಎಚ್.ಮುನಿಯಪ್ಪ ಮತ್ತವರ ಬೆಂಬಲಿಗರ ‘ಒಳೇಟು’ ಕೈಗೆ ಹೊಡೆತ ಬೀಳುವುದರಲ್ಲಿ ಅನುವಾನವೇ ಇಲ್ಲ. ಇದೆಲ್ಲದರ ನಡುವೆ ಬಿಜೆಪಿ ನಾಯಕರಾದ ಡಾ.ಕೆ.ಸುಧಾಕರ್, ಮುನಿರತ್ನ, ಮುನಿಸ್ವಾಮಿ ವರ್ತೂರು ಆರ್.ಪ್ರಕಾಶ್‌ರ ಗೆಲುವಿಗೆ ಅಗತ್ಯವಾದ ಎಲ್ಲ ಪಟ್ಟುಗಳನ್ನು ಹಾಕುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟು ಅನಾಯಾಸವಾಗಿ ಜೆಡಿಎಸ್ ಅಭ್ಯರ್ಥಿ ಜಯಭೇರಿ ಬಾರಿಸಲಿದ್ದಾರೆ ಎಂಬುದು ದಳಪತಿಗಳ ಪ್ರಬಲ ನಂಬಿಕೆಯಾಗಿದೆ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಬದಲಾಗಿ ಬೇರೆಯವರು ಸ್ಪರ್ಧಿಸಿದರೆ ಅಭ್ಯರ್ಥಿಗೆ ತಕ್ಕಂತೆ ಇಡೀ ಕ್ಷೇತ್ರದ ರಾಜಕೀಯ ಚಿತ್ರಣವೂ ಬದಲಾಗಲಿದೆ.
ಜೆಡಿಎಸ್ ಮತದಾರರು ಗಟ್ಟಿ
ಕೋಲಾರ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್‌ನಿಂದ ಕೆ.ಶ್ರೀನಿವಾಸಗೌಡ ಗೆದ್ದಿದ್ದು, ನಂತರ ಕಾಂಗ್ರೆಸ್ ಅಪ್ಪಿಕೊಂಡಿದ್ದಾರೆ. ಈಗಲೂ ಮಾನಸಿಕವಾಗಿ ಅವರು ಕಾಂಗ್ರೆಸ್‌ನಲ್ಲಿದ್ದರೂ, ತಾಂತ್ರಿಕವಾಗಿ ಜೆಡಿಎಸ್‌ನಲ್ಲೇ ಇದ್ದಾರೆ. ಸಿದ್ದರಾಮಯ್ಯಗಾಗಿ ಕಣದಿಂದ ಹಿಂದೆ ಸರಿದಿರುವ ಶ್ರೀನಿವಾಸಗೌಡರು ಈ ಬಾರಿ ಕ್ಷೇತ್ರ ಕಡೆಗಣನೆ ಮಾಡಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಅವರ ಬಗ್ಗೆ ಒಕ್ಕಲಿಗರು ಸೇರಿದಂತೆ ಎಲ್ಲ ವರ್ಗದವರಲ್ಲೂ ಅಸಮಾಧಾನ ಮಡುಗಟ್ಟಿದೆ. ಅವರು ಕಾಂಗ್ರೆಸ್‌ಗೆ ವಲಸೆ ಹೋದರೂ, ಜೆಡಿಎಸ್ ಮತದಾರರು ಅವರನ್ನು ಹಿಂಬಾಲಿಸಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದು ತೆನೆ ನಾಯಕರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಕೋಲಾರಕ್ಕೆ ಬರ‌್ತೀನಿ ಎಂದ ಸಿದ್ದು
ಕೋಲಾರದಲ್ಲಿ ನೀವು ತಪ್ಪದೇ ಸ್ಪರ್ಧಿಸಬೇಕು, ನೀವು ಗೆದ್ದೇ ಗೆಲ್ತೀರಿ, ನಾವು ನಿಮ್ಮನ್ನು ಗೆಲ್ಲಿಸಿಕೊಂಡು ಬರ‌್ತೀವಿ ಎಂದು ಜಿಲ್ಲೆಯ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ಸದಸ್ಯರು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ವಾಡಿಕೊಂಡಿದ್ದು, ನೀವೆಲ್ಲ ಗೆಲ್ಲಿಸ್ತೀವಿ ಅನ್ನೋವಾಗ ನಾನೇಕೆ ಸ್ಪರ್ಧಿಸಲ್ಲ ಎಂದು ಹೇಳಲಿ ಎಂದು ಮರುಪ್ರಶ್ನೆ ಹಾಕಿದ್ದು, ಮತ್ತೊಮ್ಮೆ ಸ್ಪರ್ಧಿಸುವ ಕುರಿತು ಭರವಸೆ ನೀಡಿದ್ದಾರೆ. ಬುಧವಾರ ಸಿದ್ದರಾಮಯ್ಯ ಅವರ ಕಾರಿನ ಬಳಿ ತೆರಳಿದ ಯುವಕರು ನೀವು ಕೋಲಾರಕ್ಕೆ ಬರಲೇಬೇಕು ಎಂದು ಕೈಹಿಡಿದು ಮನವಿ ವಾಡಿಕೊಳ್ಳುತ್ತಿದ್ದಂತೆ ಖಂಡಿತಾ ಬರ‌್ತೀನಿ ಎಂದಿದ್ದಾರೆ. ಆಗ ಯುವಕರು ನಾವೆಲ್ಲ ಬೂತ್‌ಮಟ್ಟದಲ್ಲಿ ನಿಂತು ಕೆಲಸ ಮಾಡಿ ಗೆಲ್ಲಿಸ್ತೀವಿ ಎಂದು ತಿಳಿಸಿದ್ದು, ಯುವಕರನ್ನು ಸಿದ್ದರಾಮಯ್ಯ ಆಶೀರ್ವದಿಸಿ ಕಳುಹಿಸಿದ್ದಾರೆ. ಯುವಕರ ಭೇಟಿ ವೀಡಿಯೋ ಸಾವಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೋಲಾರ ಕ್ಷೇತ್ರವನ್ನು ಲಘುವಾಗಿ ಪರಿಗಣಿಸುವ ಮಾತೇ ಇಲ್ಲ. ಸಿದ್ದರಾಮಯ್ಯ ಅಲ್ಲ, ಅಲ್ಲಿ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದ್ರೂ ಚುನಾವಣೆಯನ್ನು ನಾನೇ ಮುಂದೆ ನಿಂತು ನಡೆಸುತ್ತೇನೆ. ಈ ಹಿಂದೆ ಜೆಡಿಎಸ್ ಗೆದ್ದಿದ್ದು, ಈ ಬಾರಿಯೂ ಕ್ಷೇತ್ರ ಉಳಿಸಿಕೊಳ್ಳುತ್ತೇವೆ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಐದು ಕಡೆ ಪಕ್ಷ ಸದೃಢವಾಗಿದ್ದು, ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. 6ಕ್ಕೆ ಆರನ್ನೂ ಗೆಲ್ಲಲು ಶ್ರಮ ಹಾಕುತ್ತೇವೆ.
ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ