

ಮೂಡಲಗಿ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರು ಮತ್ತು ಯುವಕರ ಮೇಲೆ ಪೊಲೀಸ್ ಸಿಬ್ಬಂದಿ ಅನವಶ್ಯಕ ಕಿರುಕುಳ ನೀಡುತ್ತಿದ್ದಾರೆ. ಕೂಡಲೇ ಬೆಳಗಾವಿ ಎಸ್ಪಿ ಅವರು ಪಂಚಮಸಾಲಿಗಳ ಸಭೆ ಆಯೋಜಿಸಿ ಕುಂದುಕೊರತೆಗಳನ್ನು ಆಲಿಸಬೇಕೆಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿ, ಯಾವುದೇ ಸಮುದಾಯದವರ ಮೇಲೆ ಪೊಲೀಸರು ವಿನಾಕಾರಣ ಕೇಸ್ ಹಾಕುವುದು ಖಂಡನೀಯ. ತಪ್ಪು ಮಾಡದೇ ಇರುವವರ ಮೇಲೆ ಕೇಸ್ ದಾಖಲಿಸುವ ಕ್ರಮ ಸರಿ ಅಲ್ಲ. ಈಗಾಗಲೇ ಗೋಕಾಕದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಿಭಟನೆ ದಿನಾಂಕ ನಿಗದಿಯಾಗಿಲ್ಲ ಅಷ್ಟರೊಳಗಾಗಿ ಪಂಚಮಸಾಲಿಗಳ ಸಭೆ ಕರೆದು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮೂಲಕ ಪೊಲೀಸ್ ಸಿಬ್ಬಂದಿ ವಿರುದ್ಧ ಸರ್ಕಾರ ಹಾಗೂ ಗೃಹಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.