ಪಂಚಮಸಾಲಿ ಸಮಾಜಕ್ಕೆ ಸಿಗಲಿದೆ ಮೀಸಲಾತಿ

Aravind Bellad
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಪಂಚಮಸಾಲಿ ಸಮಾಜ ಸೇರಿ ಇತರ ಸಮಾಜಕ್ಕೆ ಮೀಸಲಾತಿ ನೀಡುವ ವಿಷಯಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಆದರೆ, ಇಂತಿಷ್ಟು ದಿನಗಳಲ್ಲಿ ಅಧಿಕೃತವಾಗಿ ಘೊಷಣೆ ಮಾಡಿ ಎಂದು ಗಡುವು ನೀಡುವುದು ಸರಿಯಲ್ಲ. ಒಳ್ಳೆಯ ನಿರ್ಧಾರ ಸರ್ಕಾರದಿಂದ ಹೊರಬೀಳಲಿದೆ. ಅಲ್ಲಿಯವರೆಗೆ ಸಮಾಧಾನದಿಂದ ಇರಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ಸಿಗುವ ಸಮಯ ಬಂದಿದೆ. ಬಸನಗೌಡ ಪಾಟೀಲ ಯತ್ನಾಳ ಹಾಗೂ ಮುರುಗೇಶ ನಿರಾಣಿ ವಾಕ್ಸಮರದಿಂದ ವಿಷಯ ಡೈವರ್ಟ್ ಜತೆಗೆ ಸೆಟ್​ಬ್ಯಾಕ್ ಆಗ್ತಿದೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜಕೀಯ ಮಾಡುತ್ತಿಲ್ಲ. ಸಮಾಜದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅವರು ರಾಜಕೀಯ ಮಾಡುತ್ತಾರೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ, ಹರಿಹರ ಪಂಚಮಸಾಲಿ ಪೀಠದ ಸ್ವಾಮೀಜಿ ಜತೆಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಭಿನ್ನಾಭಿಪ್ರಾಯ ಇರುವುದು ಎಲ್ಲರಿಗೂ ಗೊತ್ತಿದೆ ಎಂದರು.

ನಾನು ಮಂತ್ರಿ ಸ್ಥಾನಕ್ಕೆ ಓಡಾಡಿಲ್ಲ. ನನ್ನ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳು ಆಗುತ್ತಿವೆ. ನನಗೆ ಟಿಕೆಟ್ ಸಿಗಲಿದೆ. ಇದರಲ್ಲಿ ಅನುಮಾನ ಬೇಡ. ನಮ್ಮ ಹಿರಿಯ ನಾಯಕರ ಮಧ್ಯೆಯೂ ಭಿನ್ನಾಭಿಪ್ರಾಯಗಳು ಇಲ್ಲ ಎಂದರು.

ರಾಜಕೀಯದಲ್ಲಿ ಏರಿಳಿತ ಸಹಜ. ಹೊರಗಿನ ಯುದ್ಧಕ್ಕಿಂತ ಒಳಗಿನ ಯುದ್ಧದಿಂದಲೇ ಸೋತವರು ಹೆಚ್ಚು ಎನ್ನುವ ಮೂಲಕ ಮಂತ್ರಿ ಸ್ಥಾನ ಸಿಗದೇ ಇರುವುದಕ್ಕೆ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ಹೊರಹಾಕಿದರು.

ಭೈರಿದೇವರಕೊಪ್ಪ ದರ್ಗಾ ತೆರವು ನಿರ್ಧಾರ ಆಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಸಿದ್ದರಾಮಯ್ಯ ಈ ಬಗ್ಗೆ ಮಾತನಾಡದೇ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನಾಟಕ ಮಾಡುತ್ತಿದ್ದಾರೆ. ನಾನು ಸಾಧ್ಯವಾದರೆ ದೇವಸ್ಥಾನ, ಚರ್ಚ್, ಮಸೀದಿ ಉಳಿಸಿ ಎಂದಿದ್ದೆ. ನಾನು ಮುಸ್ಲಿಂ, ದಲಿತ ವಿರೋಧಿ ಅಲ್ಲ. ಮುಸ್ಲಿಮರಲ್ಲಿಯೇ ಹಿಂದುಳಿದವರು ಇದ್ದಾರೆ. ಅವರಿಗೆ ಪ್ರತ್ಯೇಕ ಅನುದಾನ ಮೀಸಲಿಡುವ ಕುರಿತು ಸಿಎಂ ಜತೆ ರ್ಚಚಿಸಿದ್ದೇನೆ. ಒಂದು ಸಮಾಜದಲ್ಲಿ ತಪ್ಪು ಭಾವನೆ ಇದ್ದುದರಿಂದ ಸಿಎಂ ಬೊಮ್ಮಾಯಿ ಅವರು ದರ್ಗಾಕ್ಕೆ ಭೇಟಿ ನೀಡಿದ್ದರು ಎಂದರು.

ಹು-ಧಾ ಅವಳಿ ನಗರದಲ್ಲಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಜನರು, ಅಧಿಕಾರಿಗಳು ಹಗಲು-ರಾತ್ರಿ ಶ್ರಮಪಟ್ಟರು. ದೇಶದ ವಿವಿಧ ರಾಜ್ಯಗಳ ಸ್ಪರ್ಧಿಗಳು ಆಗಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಕೊಟ್ಟ ಮೇಲೆ ಇಡೀ ದೇಶವೇ ನಮ್ಮ ಹುಬ್ಬಳ್ಳಿ ಕಡೆ ನೋಡುವಂತಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net