ಮೀಸಲಾತಿ ಹೋರಾಟಕ್ಕೆ ಸಿಕ್ಕಿಲ್ಲ ಸ್ಪಂದನೆ: ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ

SGR WEB 1
Published on

ಸಾಗರ: ರಾಜ್ಯ ಸರ್ಕಾರ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರ ಲಿಂಗಾಯತರಿಗೆ ಒಬಿಸಿ ಮೀಸಲಾತಿ ನೀಡದಿದ್ದರೆ ಮುಂದಿನ ಪರಿಣಾಮವನ್ನು ಸರ್ಕಾರಗಳು ಎದುರಿಸಬೇಕಾಗುತ್ತದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸಾಗರ ತಾಲೂಕಿನ ಕೆಳದಿಯಲ್ಲಿ ಮಂಗಳವಾರ ಪಂಚಮಸಾಲಿ-ಗೌಡ ಲಿಂಗಾಯತ, ಮಲೇಗೌಡ ದೀಕ್ಷಾ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಮತ್ತು ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮಲೆನಾಡು ಭಾಗದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೂರು ಬಾರಿ ಸಭೆ ನಡೆಸಿದಾಗಲೂ ಮೀಸಲಾತಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಈಗ ಆ.23ಕ್ಕೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಈ ಬಾರಿಯೂ ಮಾತು ಮುರಿದರೆ ಸಮುದಾಯ ತನ್ನ ಆಕ್ರೋಶವನ್ನು ಯಾವ ರೀತಿ ವ್ಯಕ್ತಪಡಿಸುತ್ತದೆ ಎಂಬುದನ್ನು ಕಾದು ನೋಡಲಿ ಎಂದರು.

ಸತತ 2 ವರ್ಷದಿಂದ ಮೀಸಲಾತಿಗಾಗಿ ಹೋರಾಟ ನಡೆಸಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಮುಂದುವರಿದಿದ್ದರೆ ಇಷ್ಟರೊಳಗೆ ಮೀಸಲಾತಿ ಘೋಷಣೆಯಾಗುತ್ತಿತ್ತು. ಯಡಿಯೂರಪ್ಪ ಅವರ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ ಸಮುದಾಯದ ಬೇಡಿಕೆ ಈಡೇರಿಸುತ್ತಾರೆಂಬ ವಿಶ್ವಾಸವಿದೆ. ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಭೇಟಿ ಮಾಡಿ ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಪ್ರತಿಭಟನೆ: ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಅಖಿಲ ಭಾರತ ಮಲೇಗೌಡ ಪಂಚಮಶಾಲಿ ಒಕ್ಕೂಟದಿಂದ ಆ.16ರಿಂದ 25ರವರೆಗೆ ಜಿಲ್ಲಾದ್ಯಂತ ಪ್ರತಿಜ್ಞಾ ಪಂಚಾಯತ್ ಅಭಿಯಾನ ಮತ್ತು ಜಾಗೃತಿಪೂರ್ವ ಸಭೆ ಆಯೋಜಿಸಲಾಗಿದೆ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. 17ಕ್ಕೆ ಸೊರಬ, 18ರಂದು ಹೊಸದುರ್ಗ, 19ಕ್ಕೆ ತೀರ್ಥಹಳ್ಳಿ, 20ಕ್ಕೆ ಶಿಕಾರಿಪುರ, 21 ಭದ್ರಾವತಿ, 22 ಕೂಡಲಸಂಗಮ, 23 ಶಿಗ್ಗಾವಿ, 24ರಂದು ಶಿವಮೊಗ್ಗದಲ್ಲಿ ಜಾಗೃತಿ ಸಭೆ ನಡೆಯಲಿದೆ. 25ರಂದು ಬೆಳಗ್ಗೆ 10ಕ್ಕೆ ಶಿವಪ್ಪನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net