ಪಂಚಮಸಾಲಿ ಪ್ರತಿಭಾ ಪುರಸ್ಕಾರ  16ಕ್ಕೆ

IMG-20230713-WA0072.jpg
Published on

ದಾವಣಗೆರೆ: ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಹರ ಸೇವಾ ಸಂಸ್ಥೆ ಹಾಗೂ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಸಹಯೋಗದಲ್ಲಿ ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಜುಲೈ 16ರಂದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ತಿಳಿಸಿದರು.

ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ಸಮಾಜದ ಸುಮಾರು 100 ವಿದ್ಯಾರ್ಥಿಗಳಿಗೆ ಪದಕ, ಪ್ರಮಾಣಪತ್ರ ಹಾಗೂ ಧನಸಹಾಯದೊಂದಿಗೆ ಪುರಸ್ಕರಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಲ್ಲದೇ ಸಮಾಜದ ಧಾರ್ಮಿಕ ಪರಂಪರೆ ಉಳಿಸುವ ಉದ್ದೇಶದಿಂದ ಎರಡೂ ತರಗತಿಗಳಲ್ಲಿ ಅಧಿಕ ಅಂಕ ಪಡೆದ ಟಾಪ್ 20 ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬೆಳ್ಳಿ ಚೌಕ ನೀಡಿ ಪುರಸ್ಕರಿಸಲಾಗುವುದು ಎಂದ ಅವರು, ಸಮಾಜದಿಂದ ರಾಜ್ಯದ ಎಲ್ಲಾ ಕಡೆಗಳಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು. ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು, ಸಿದ್ದಗಂಗಾ ಪಿಯು ಕಾಲೇಜ್ ನಿರ್ದೇಶಕ ಡಾ.ಡಿ.ಎಸ್. ಜಯಂತ್ ಹಾಗೂ ಎವಿಕೆ ಮಹಿಳಾ ಕಾಲೇಜು ಉಪನ್ಯಾಸಕಿ ಡಾ.ಗೀತಾ ಬಸವರಾಜು ಉಪನ್ಯಾಸ ನೀಡುವರು. ಸಂಘದ ವಿಜಯನಗರ ಜಿಲ್ಲಾಧ್ಯಕ್ಷ, ವಕೀಲ ಪ್ರಕಾಶ್ ಪಾಟೀಲ್, ಉದ್ಯಮಿಗಳಾದ ಅಂದನೂರು ಆನಂದ, ಎಸ್.ಕೆ. ಶಶಿಧರ್, ಕಂಚಿಕೇರಿ ಮಹೇಶ್, ಎ.ಎಸ್. ರಾಜು, ಎನ್.ಎಂ. ಕಡೇಕೊಪ್ಪ ರಾಜಣ್ಣ ಅತಿಥಿಗಳಾಗಿ ಭಾಗವಹಿಸುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದಾವಣಗೆರೆ ವಿಶ್ವವಿದ್ಯಾಲಯ ಗಣಿತ ಶಾಸ್ತ್ರ ವಿಭಾಗದ ಪ್ರೊ.ಯು.ಎಸ್. ಮಹಾಬಲೇಶ್, ವೈದ್ಯೆ ಡಾ. ಅನುರೂಪ, ಉದ್ಯಮಿ ನಾಗರತ್ನ ಎ.ಜಿ. ಪೂಜಾರ್, ಕೆಎಸ್‌ಇಎಸ್ ಅಬಕಾರಿ ಉಪ ಆಯುಕ್ತೆ ಬಿ.ಎಂ. ಅಶ್ವಿನಿ ಮತ್ತು ಸಮಾಜದ ಮುಖಂಡರಿಗೆ ಸನ್ಮಾನಿಸಲಾಗುವುದು ಎಂದರು. ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಉಪಾಧ್ಯಕ್ಷ ಎಂ. ದೊಡ್ಡಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಸಿ. ಕಾಶಿನಾಥ್, ತಾಲೂಕು ಅಧ್ಯಕ್ಷ ಎಸ್. ಮಲ್ಲಿನಾಥ್, ಎಚ್.ಎಂ. ನಾಗರಾಜ್, ಲಿಂಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು. ಕೋಟ್.. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಿತ್ಯ ದಾಸೋಹ ಕಾರ್ಯಕ್ರಮ ನಡೆಯುತ್ತಿದೆ. ಮಠದಲ್ಲಿ ಸಮಾಜದ 46 ಅನಾಥ ಹಾಗೂ ಬಡ ಮಕ್ಕಳಿಗೆ ದಾಸೋಹ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಪೀಠದಲ್ಲಿ ಶೇ.85ರಷ್ಟು ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ. - ಬಿ.ಸಿ. ಉಮಾಪತಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net