ಪಂಚಮ ಪಾದುಕಾ ಆರಾಧನೆ 9ರಿಂದ

aaraadane
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪಂಚಮ ಪಾದುಕಾ ಆರಾಧನೆ ಮಹೋತ್ಸವ ನಿಮಿತ್ತ ಫೆ.9 ಮತ್ತು 10ರಂದು ನಗರದಲ್ಲಿ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

9 ರಂದು ಸಂಜೆ 4.30 ಗಂಟೆಗೆ ಚಿನ್ಮಯಿ ಶಾಲೆ ಬಳಿಯಿರುವ ಶ್ರೀ ಆಂಜನೇಯ ದೇವಸ್ಥಾನದಿಂದ ಭವಾನಿನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದವರೆಗೆ ವಿವಿಧ ವಾದ್ಯವೈಭವಗಳಿಂದ ಶೋಭಾಯಾತ್ರೆ ಜರುಗಲಿದೆ. ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹಾಗೂ ಪೇಜಾವರ ಅಧೋಕ್ಷಪೀಠದ ಪೀಠಾಧಿಕಾರಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರನ್ನು ಸ್ವಾಗತಿಸಲಾಗುತ್ತದೆ.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಹಾಗೂ ಭವಾನಿನಗರ ಶ್ರೀ ರಾಘವೇಂದ್ರ ಸ್ವಾಮಿ ಮಠ ಗಳ ಆಶ್ರಯದಲ್ಲಿ ಶ್ರೀ ವಿಶ್ವೇಶತೀರ್ಥ ಸೇವಾ ಸಂಘ ಹಮ್ಮಿಕೊಂಡಿದೆ.

ಶೋಭಾಯಾತ್ರೆ ಬಳಿಕ ಉಭಯ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರುಗುವುದು. ಟಿಟಿಡಿ ಹಾಗೂ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಭಜನಾ ಮಂಡಳಿಗಳಿಂದ ಸಾಮೂಹಿಕ ಲಕ್ಷ್ಮೀ ಶೋಭಾನ ಹಾಗೂ ಪಂಡಿತರಾದ ಡಾ, ರಂಗನಾಥ ಕಟ್ಟಿ, ಡಾ. ಶ್ಯಾಮಾಚಾರ್ಯ ಬಂಡಿ, ಡಾ. ವಿಕ್ರಮ ಸಿಂಹಾಚಾರ್ ಇವರಿಂದ ಪ್ರವಚನ ನೆರವೇರುವುದು.

ಚಕ್ರವರ್ತಿ ಸೂಲಿಬೆಲೆ ಅವರಿಂದ ಗುರು ಸಂಸ್ಮರಣೆ ನೆರವೇರುವುದು. ಡಾ.ಸತ್ಯಮೂರ್ತಿ ಆಚಾರ್ಯ ಉಪಸ್ಥಿತರಿರುವರು. ಬಳಿಕ ಉಭಯ ಶ್ರೀಪಾದಂಗಳವರಿಂದ ಆಶೀರ್ವಚನ ನಡೆಯುವುದು.

10ರಂದು ಬೆಳಗ್ಗೆ 8 ಗಂಟೆಗೆ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಭಜನಾ ಮಂಡಳಿ ಅವರಿಂದ ಭಜನೆ, ಪ್ರವಚನ, ಉಭಯ ಶ್ರೀಪಾದಂಗಳವರ ಸಂಸ್ಥಾನ ಪೂಜೆ, ಆಶೀರ್ವಚನ ನೆರವೇರಲಿದೆ ಎಂದು ಶ್ರೀ ವಿಶ್ವೇಶತೀರ್ಥ ಸೇವಾಸಂಘದ ಗೋಪಾಲ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net