

ತುಮಕೂರು: ಜಗತ್ತಿಗೆ ಅಹಿಂಸಾ ತತ್ವ ಸಾರಿದ ಮಹಾವೀರರು ಬೋಧಿಸಿರುವ ಮಾನವನ ಬದುಕಿಗೆ ಬೇಕಾದ ಪಂಚತತ್ವ ಅಳವಡಿಸಿಕೊಂಡರೆ ಇಡೀ ವಿಶ್ವವೇ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ತಹಸೀಲ್ದಾರ್ ರಾಜೇಶ್ವರಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಶ್ವೇತಾಂಬರ ಮತ್ತು ದಿಗಂಬರ್ಜೈನ ಸಮಾಜದ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಭೋಗ, ಲಾಲಸೆ ಜೀವನದಿಂದ ಹೊರಬರಲು ಸತ್ಯ, ಅಹಿಂಸೆ, ಬ್ರಹ್ಮಚರ್ಯ ಸೇರಿ ಐದು ಪ್ರಮುಖ ಅಂಶಗಳನ್ನು ಮಹಾವೀರರು ಗುರುತಿಸಿ, ಅನುಸರಿಸಿದ್ದಾರೆ. ಅವುಗಳನ್ನು ಪಾಲನೆ ಮಾಡುವ ಮೂಲಕ ನಾವು ಕೂಡ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಜಯಂತಿಗೂ ಅರ್ಥ ಬರುತ್ತದೆ ಎಂದರು.
ಹಿರಿಯ ಸಾಹಿತಿ ಡಾ.ಪದ್ಮಪ್ರಸಾದ್ ಮಾತನಾಡಿ, ಕ್ರಿಸ್ತಪೂರ್ವ 599ರಲ್ಲಿ ಜನಿಸಿದ ಮಹಾವೀರರು ಜೈನಧರ್ಮದ 24ನೇ ತೀರ್ಥಂಕರರು. ಸತ್ಯ, ಅಹಿಂಸೆ, ಅಪಗ್ರಹ, ಬ್ರಹ್ಮಚರ್ಯ,ಆಸ್ತೆಯ ಎಂಬ ಐದು ತತ್ವಗಳನ್ನು ನೀಡಿದ್ದಾರೆ. ಇನ್ನೊಬ್ಬರನ್ನು ನೋಯಿಸಿ ದುಡಿಯುವ ಹಣ ಎಂದಿಗೂ ಒಪು$್ಪವಂತಹದ್ದಲ್ಲ. ಸುಳ್ಳು, ಕಳ್ಳತನಕ್ಕೆ ಅವಕಾಶವಿಲ್ಲದೆ, ಸರಿಯಾದ ದಾರಿಯಲ್ಲಿ, ಅಗತ್ಯಕ್ಕೆ ತಕ್ಕಷ್ಟೇ ಸಂಪತ್ತು ಸಂಗ್ರಹವೇ ನಿಮ್ಮ ನೆಮ್ಮದಿಯ
ಜೀವನಕ್ಕೆದಾರಿ. ನೀನು ಬದುಕು, ಇತರರನ್ನು ಬದುಕಲು ಬಿಡು ಎಂಬ ತತ್ವದ ಮೂಲಕ ಸಕಲರಿಗೂ ಲೇಸನ್ನೇ ಬಯಸಿದ ಮಹಾವೀರರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಹಿಂಸೆಯನ್ನು ತ್ಯಜಿಸುವುದರಿಂದ ನೆಮ್ಮದಿಯ ಜೀವನ ಸಾಧ್ಯ ಎಂಬುದನ್ನು ಅಹಿಂಸೋ ಪರಮಧರ್ಮ@ ಎಂಬ ತತ್ವದ ಮೂಲಕ ಮಹಾವೀರರು ತೋರಿಸಿ ಕೊಟ್ಟಿದ್ದಾರೆ. ತಾವು ಹೇಳಿದಂತೆ ನಡೆದು ತೋರಿಸಿದ್ದಾರೆ. ಇಂದಿನ ಪ್ರಕ್ಷುಬ್ಧ ಜೀವನಕ್ಕೆ ಮಹಾವೀರರ ತತ್ವಗಳು ಮದ್ದಾಗಿವೆ ಎಂದರು. ಜೈನ ಮುನಿ ಶ್ರೀ ಭಾನುರತ್ನ ವಿಜಯಜೀ ಮಾತನಾಡಿ, ನೆಮ್ಮದಿ ಮತ್ತು ಶಾಂತಿಯ ಜೀವನಕ್ಕೆ ಅಗತ್ಯವಿರುವ ಐದು ಸೂತ್ರಗಳನ್ನು ಮಹಾವೀರರು ನೀಡಿದ್ದಾರೆ. ಅವುಗಳನ್ನು ನಾವು ಪಾಲಿಸಿದರೆ ಇಡೀ ವಿಶ್ವವೇ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು. ಜೈನ ಮುನಿ ಶ್ರೀಹರ್ಷ ರತ್ನ ವಿಜಯಜೀ, ಚಿಕ್ಕಪೇಟೆ ಜಿನ ಮಂದಿರದ ಮುಖ್ಯಸ್ಥ ಬಾಹುಬಲಿ ಬಾಬು, ಕಾರ್ಯದರ್ಶಿ ಎಂ.ನಾಗರಾಜು, ಖಜಾಂಚಿ ಸುಬೋದ್ಕುಮಾರ್ ಜೈನ್, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಉತ್ತಮ ಜೈನ್, ಸಮಾಜದ ಮುಖಂಡರಾದ ಸುರೇಂದ್ರ ಷಾ, ಶುಬೋದ್ಕುಮಾರ್, ವಿನಯ ಜೈನ್ ಇತರರು ಇದ್ದರು. ಮಹಾವೀರರಜಯಂತಿ ಅಂಗವಾಗಿ ನಗರದ ಎಂ.ಜಿ.ರಸ್ತೆಯಿಂದ, ಶೀರಾಗೇಟ್ನ ಜಿಲ್ಲಾಧಿಕಾರಿ ಕಚೇರಿವರೆಗೆ ಶ್ವೇತಾಂಬರರು, ಚಿಕ್ಕಪೇಟೆಯಿಂದ ಬಿ.ಎಚ್.ರಸ್ತೆಯ ಜೈನಭವನದವರೆಗೆ ದಿಗಂಬರ್ ಸಮುದಾಯದ ಜನರು ಮಹಾವೀರರ ಮೆರವಣಿಗೆ ನಡೆಸಿದರು. ಎರಡು ಮೆರವಣಿಗೆಗಳು ಜಿಲ್ಲಾಧಿಕಾರಿ ಕಚೇರಿ ಬಳಿ
ಸ್ಪಂದಿಸಿ, ಪರಸ್ವರ ಶುಭಾಷಯ ವಿನಿಮಯ ಮಾಡಿಕೊಂಡರು.