ಪಂಚತಂತ್ರ ದಾಖಲೆ ಅತಂತ್ರ

Panchatantra
Published on

ರಾಜೇಂದ್ರ ಶಿಂಗನಮನೆ ಶಿರಸಿ

ನಗರದಂಚಿನ ಗ್ರಾಮ ಪಂಚಾಯಿತಿಗಳ ಹಲವು ಗ್ರಾಮಗಳು ಪಂಚತಂತ್ರ ತಂತ್ರಾಂಶದಲ್ಲಿ ಸೇರ್ಪಡೆಯಾಗದ ಕಾರಣ ನಿವೇಶನ ನೋಂದಣಿ ಹಾಗೂ ಗ್ರಾಮ ನಕ್ಷೆ ಪಡೆಯಲು ಅಡ್ಡಿಯಾಗಿದೆ.

ಪಂಚತಂತ್ರ ತಂತ್ರಾಂಶದಲ್ಲಿ ತಮ್ಮ ಗ್ರಾಮದ ಹೆಸರು ಸೇರ್ಪಡೆಯಾಗದ್ದರಿಂದ ನಗರದ ಹೊರವಲಯದ ದೊಡ್ನಳ್ಳಿ, ಇಸಳೂರು, ಹುತ್ಗಾರ, ಯಡಳ್ಳಿ ಗ್ರಾಮ ಪಂಚಾಯಿತಿಗಳ 10ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ನಿವಾಸಿಗಳು 5 ವರ್ಷಗಳಿಂದ ವಿವಿಧ ಸಮಸ್ಯೆ ಅನುಭವಿಸುವಂತಾಗಿದೆ.

ಪಂಚತಂತ್ರ ತಂತ್ರಾಂಶ ಅನುಷ್ಠಾನಕ್ಕೆ ಬರುವ ಮುನ್ನ ಗ್ರಾಮ ಪಂಚಾಯಿತಿಯ ಆಫ್​ಲೈನ್ ವ್ಯವಸ್ಥೆಯಲ್ಲಿ ಸುಲಭವಾಗಿ ಮನೆ ನಂಬರ್, ನಿವೇಶನ ನೋಂದಣಿ, ಗ್ರಾಮ ನಕ್ಷೆ ಹಾಗೂ ಇತರ ದಾಖಲೆ ನೀಡಲಾಗುತ್ತಿತ್ತು. ಆದರೆ, ಆನ್​ಲೈನ್ ವ್ಯವಸ್ಥೆ ಬಂದ ನಂತರ ಯಾವುದೇ ದಾಖಲೆ ಪಡೆಯುವುದಿದ್ದರೂ ಆಯಾ ಗ್ರಾಮದ ಹೆಸರು ನಮೂದಿಸುವುದು ಕಡ್ಡಾಯ. ಆದರೆ, ತಾಂತ್ರಿಕ ಕಾರಣದಿಂದ ಪಂಚಾಯಿತಿಗಳ ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಮ ಸೇರ್ಪಡೆಯಾಗದ ಪರಿಣಾಮ ಹಲವು ಸಮಸ್ಯೆ ಎದುರಾಗಿದೆ.

ಇಲ್ಲಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ಒಂದರಲ್ಲಿಯೇ ಸ.ನಂ. 212ರಿಂದ 237 ಹಾಗೂ ಸ.ನಂ. 296ರ ನಿವಾಸಿಗಳು ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಶಿರಸಿ ಗ್ರಾಮದ ಶ್ರೀನಗರ, ಕೈಗಾರಿಕಾ ವಸಹತು ಪ್ರದೇಶ, ಕಸದಗುಡ್ಡೆ, ಶ್ರೀಗಂಧದ ಸಂಕೀರ್ಣದ ನಿವಾಸಿಗಳಿಗೆ ಈ ಹಿಂದೆ ಗ್ರಾಮ ಪಂಚಾಯಿತಿಯಿಂದಲೇ ಮನೆ ನಂಬರ್ ನೀಡಲಾಗಿತ್ತು. ಆದರೆ, ಪಂಚತಂತ್ರ ತಂತ್ರಾಂಶದಲ್ಲಿ ಮಾತ್ರ ಈ ಗ್ರಾಮ ಇಲ್ಲ. ಇದರಿಂದ ಜನಸಾಮಾನ್ಯರ ಜತೆ ಕೈಗಾರಿಕೆಗಳಿಗೂ ಸಂಕಷ್ಟ ಎದುರಾಗಿದೆ. ಕೈಗಾರಿಕೆಗಳಿಗೆ ಸಾಲ ಪಡೆಯಲು, ನಿವೇಶನ ಮಾರಾಟ, ನೋಂದಣಿ ಹಾಗೂ ಗ್ರಾಮ ನಕ್ಷೆ ಪಡೆಯಲು ಕೂಡ ಸಮಸ್ಯೆಯಾಗಿದೆ.

2015ರಲ್ಲಿ ಕೈಗಾರಿಕಾ ವಸಾಹುತಗಳ ಪ್ರಮುಖರು ಜಿಲ್ಲಾಧಿಕಾರಿ ಅವರ ಏಕಗವಾಕ್ಷಿ ಸಭೆಯಲ್ಲಿ ಕುಂದುಕೊರತೆ ಬಗ್ಗೆ ಚರ್ಚೆ ನಡೆಸಿದ್ದರು. ಆಗ ಸಮಸ್ಯೆಯನ್ನು ಪಂಚಾಯಿತಿ ಅವರು ಡಾಟಾ ಎಂಟ್ರಿ ಮಾಡಿಸಿ ನಿವಾರಿಸಿಕೊಳ್ಳಲು ಸೂಚಿಸಿದ್ದರು. ಆ ಪ್ರಕಾರ 2015ರ ಅಕ್ಟೋಬರ್ 13ರಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ತಾಲೂಕು ಪಂಚಾಯಿತಿ ಅಧಿಕಾರಿಗೆ ವರದಿ ನೀಡಿದ್ದರು. ದೊಡ್ನಳ್ಳಿ ಗ್ರಾಮ ಪಂಚಾಯಿತಿಯ ಸ.ನಂ. 212ರಿಂದ 237 ಹಾಗೂ ಸ.ನಂ.296 ಇವು ಶಿರಸಿ ಗ್ರಾಮದ ಸ.ನಂ. ಗಳಾಗಿದ್ದು, ತಕ್ಷಣ ಪಂಚತಂತ್ರ ತಂತ್ರಾಂಶದಲ್ಲಿ ಶಿರಸಿ ಗ್ರಾಮವನ್ನು ಸರ್ಕಾರವೇ ಸೇರ್ಪಡೆ ಮಾಡುವಂತೆ ಕೋರಿದ್ದರು. ಅದಾಗಿ 5 ವರ್ಷಗಳೂ ಕಳೆದರೂ ಇನ್ನೂ ಯಾವುದೇ ಸೇರ್ಪಡೆಯಾಗಿಲ್ಲ. ಹೀಗಾಗಿ, ಸಮಸ್ಯೆ ಮತ್ತಷ್ಟು ಬಿಡಗಾಯಿಸಿದೆ.

ನಿಜಕಾರಣ ಬಾಯಿಬಿಡದ ಅಧಿಕಾರಿಗಳು: ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಪಿಡಿಒ, ಕಾರ್ಯದರ್ಶಿಗಳು ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಮ ಸೇರ್ಪಡೆ ಮಾಡಲು ನಿರ್ಲಕ್ಷ್ಯ ಧೋರಣೆ ತೋರಿದ್ದರು. ಇದರಿಂದ ಅಂತಹ ಗ್ರಾಮಗಳ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದ್ದು, ಹಾಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒಗಳು ಕೂಡ ತಾಂತ್ರಿಕ ಸಮಸ್ಯೆಯಿಂದ ಸೇರ್ಪಡೆ ವಿಳಂಬವಾಗಿದೆ ಎನ್ನುತ್ತಿದ್ದಾರೆ. ಹೀಗೆ ಗ್ರಾಮಗಳನ್ನು ಕೈಬಿಡಲು ಅಥವಾ ತಂತ್ರಾಂಶದಲ್ಲಿ ಸೇರ್ಪಡೆ ಆಗದಿರಲು ನಿಜವಾದ ಕಾರಣ ಮಾತ್ರ ಯಾರೊಬ್ಬರೂ ಬಾಯಿ ಬಿಡದಿರುವುದು ಸಮಸ್ಯೆ ಇನ್ನಷ್ಟು ಜಟಿಲವಾಗಲು ಕಾರಣವಾಗಿದೆ.

ತಾಂತ್ರಿಕ ಕಾರಣಗಳಿಂದ ದೊಡ್ನಳ್ಳಿ ಹಾಗೂ ಇತರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳು ಇ-ಸ್ವತ್ತು ತಂತ್ರಾಂಶದಲ್ಲಿ ನೋಂದಣಿ ಆಗದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗುವುದು. ಸರ್ಕಾರದ ನಿರ್ದೇಶನದಂತೆ ಶೀಘ್ರ ತಂತ್ರಾಂಶದಲ್ಲಿ ಗ್ರಾಮ ನಮೂದಿಸಲು ಕ್ರಮ ವಹಿಸಲಾಗುವುದು. | ಎಂ.ರೋಷನ್ ಜಿಲ್ಲಾ ಪಂಚಾಯಿತಿ ಸಿಇಒ

ಪಪಂಗಳಲ್ಲಿ ಬರುವ ಗ್ರಾಮಗಳು ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗದೆ ಇದ್ದರೆ ಜಿಲ್ಲಾಧಿಕಾರಿ ಅವರಿಂದ ಪೂರಕ ಮಾಹಿತಿ ಪಡೆದು ಎನ್​ಐಸಿ ಅಧಿಕಾರಿಗಳ ಮುಖಾಂತರ ರಾಜ್ಯ ಎನ್​ಐಸಿ ಅಧಿಕಾರಿಗಳಿಗೆ ಇ-ಸ್ವತ್ತು ತಂತ್ರಾಂಶ ನಮೂದಿಸಿ ಕ್ರಮ ಕೈಗೊಳ್ಳಲು 2014ರಲ್ಲಿಯೇ ಸೂಚನೆ ನೀಡಲಾಗಿತ್ತು. ಆದರೆ, ಇಷ್ಟೆಲ್ಲ ಆದೇಶ, ನಿರ್ಣಯ, ಸೂಚನೆಗಳಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. | ಅಮರ ನಾಯ್ಕ ನೊಂದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net