ಪಂಚಗವ್ಯದಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ

kanneri samiji
ಸಿಂಧನೂರಿನ ಶುಕ್ರವಾರ ಹಿಂದು ಮಹಾಗಣಪತಿ ಸಮಿತಿ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಕೊಲ್ಲಾಪುರ ಕನ್ನೇರಿಯ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ, ಅಧ್ಯಕ್ಷ ನೆಕ್ಕಂಟಿ ಸುರೇಶ ಇತರರಿದ್ದರು.  ಇದ್ದರು.
Published on

ಸಿಂಧನೂರು: ಅತಿಯಾದ ರಾಸಾಯನಿಕ ಬಳಕೆಯಿಂದ ನೀರಾವರಿ, ಖುಷ್ಕಿ ಭೂಮಿಯಲ್ಲಿ ಸತ್ವ ಉಳಿದಿಲ್ಲ. ಆದ್ದರಿಂದ ರೈತರು ಕೃಷಿ ಭೂಮಿ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ಕೊಲ್ಲಾಪುರ ಕನ್ನೇರಿಯ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಗಣೇಶೋತ್ಸವ ನಿಮಿತ್ತ ನಗರದಲ್ಲಿ ಶುಕ್ರವಾರ ಹಿಂದು ಮಹಾಗಣಪತಿ ಸಮಿತಿ ಆಯೋಜಿಸಿದ್ದ ರೈತರ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು. ದೇಶದಲ್ಲಿ ಶೇ.23 ಭೂಮಿ ಬಿತ್ತನೆ ಮಾಡಲು ಯೋಗ್ಯವಿಲ್ಲ. ಇನ್ನೂ ಮುಂದಿನ ದಿನಗಳಲ್ಲಿ ಮತ್ತೆ ಶೇ.18 ಭೂಮಿ ಬಿತ್ತನೆಗೆ ಬರುವುದಿಲ್ಲ. ರೈತರು ಗಂಭೀರವಾಗಿ ಪರಿಗಣಿಸದ ಕಾರಣ ಮಣ್ಣಿನಲ್ಲಿ ಆಮ್ಲ ಮತ್ತು ಸ್ಪರ್ಶಗುಣ ಕಡಿಮೆಯಾಗುತ್ತಿದೆ.

ಕೃಷಿಯಲ್ಲಿ ಮಣ್ಣಿನ ಆರೋಗ್ಯ ಬಹಳಷ್ಟು ಮಹತ್ವದ್ದಾಗಿದೆ. ಆಕಳುಗಳ ಸೆಗಣಿ, ಮೂತ್ರ, ಹಾಲು, ಮೊಸರು, ತುಪ್ಪದಿಂದ ಮಾಡಿದ ಪಂಚಗವ್ಯದಿಂದ ತಯಾರು ಮಾಡಿ ಭೂಮಿಗೆ ನೀಡುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ ಎಂದರು.

ರಾಜ್ಯದಲ್ಲಿಯೇ ಅತಿಹೆಚ್ಚು ರಸಗೊಬ್ಬರ, ಕ್ರಿಮಿನಾಶಕ ಬಳಸುವ ಜಿಲ್ಲೆ ರಾಯಚೂರು ಆಗಿದೆ. ಇದರಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಬೆಳೆ ಬೆಳೆಯುವುದು ಕಷ್ಟವಾಗಲಿದೆ. ಭೂಮಿಯ ಬದುವಿನಲ್ಲಿ ಗಿಡ-ಮರಗಳೇ ಇಲ್ಲ. ಮಣ್ಣಿನಿಂದ ಹಣ ಬಯಸುತ್ತಿದ್ದೇವೆ ಹೊರತು, ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬುದ್ಧಿವಂತಿಕೆಯಿಂದ ಕೃಷಿ ಮಾಡುವುದರಿಂದ ಮಣ್ಣು ಉಳಿಸಲು ಸಾಧ್ಯ ಎಂದರು.

ಬಜರಂಗದಳದ ಉತ್ತರ ಪ್ರಾಂತದ ಕಾರ್ಯದರ್ಶಿ ವಿನಯಕುಮಾರ ಎಲಿಗೇರ ಮಾತನಾಡಿ, ಅಧ್ಯಾತ್ಮದಲ್ಲಿ ದೇವರನ್ನು ಕಾಣಬೇಕು. ದೀನ, ದಲಿತ, ಬಡವ ಹಾಗೂ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದರೆ ಅದುವೇ ಆಧ್ಯಾತ್ಮ ಎಂದರು.

ಇರಕಲ್ ಮಠದ ಬಸವಪ್ರಸಾದ ಸ್ವಾಮೀಜಿ, ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ, ಅಧ್ಯಕ್ಷ ನೆಕ್ಕಂಟಿ ಸುರೇಶ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಹಂಪನಗೌಡ ಬಾದರ್ಲಿ, ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ತಹಸೀಲ್ದಾರ್ ಅರುಣ್ ದೇಸಾಯಿ, ಉದ್ಯಮಿ ರಾಜೇಶ ಹಿರೇಮಠ, ಕಾಡಾ ಮಾಜಿ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net