ಪಂಚ ಯೋಜನೆಗಳಿಗೂ ಬಿಜೆಪಿ ಅಡ್ಡಿ,ಕಾಂಗ್ರೆಸ್ ಆಕ್ರೋಶ

CONGRESS PROTEST (3)--05
Published on


ಚಿತ್ರದುರ್ಗ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ವಿತರಿಸದೆಯೇ ದ್ವೇಷ ರಾಜಕಾರಣಕ್ಕೆ ಮುಂದಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ, ಪ್ರಧಾನಿ ವಿರುದ್ಧ ಧಿಕ್ಕಾರ ಕೂಗಿದರು. ಅಕ್ಕಿ ವಿತರಿಸಲೇಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಒಕ್ಕೂಟದ ವ್ಯವಸ್ಥೆ ಧಿಕ್ಕರಿಸಿ ಅಕ್ಕಿ ನೀಡಲು ನಿರಾಕರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಮೊದಲಿಗೆ ಅಕ್ಕಿ ನೀಡುವುದಾಗಿ ಹೇಳಿ ಬಳಿಕ ಸ್ಥಗಿತಗೊಳಿಸಲು ಮುಂದಾಗಿದೆ. ಈ ಮೂಲಕ ಬಡವರ ಸೇವೆಗೆ ಅಡ್ಡಗಾಲು ಹಾಕುತ್ತಿದೆ. ಸಂಗ್ರಹವಿದ್ದರೂ ಅಂಗ ಸಂಸ್ಥೆಗಳಾದ ಎಫ್‌ಎಸ್‌ಐ ಮತ್ತಿತರೇ ಆಹಾರ ನಿಗಮಗಳಿಂದ ನೀಡದೆ ರಾಜಕಾರಣ ಮಾಡಲು ಹೊರಟಿರುವುದು ಖಂಡನೀಯ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, 5 ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್ಸಿಗರು ಪ್ರಯತ್ನಿಸುತ್ತಿದ್ದರೆ, ಹತ್ತಿಕ್ಕುವ ಕುತಂತ್ರ ಬಿಜೆಪಿಯವರು ಮಾಡುತ್ತಿದ್ದಾರೆ. ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಯಾಗಿದ್ದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಎಂದು ಕಿಡಿಕಾರಿದರು.

ರಾಜ್ಯದ ಯೋಜನೆಗಳು ಸಮರ್ಪಕ ಜಾರಿಯಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ದೊಡ್ಡ ಪೆಟ್ಟು ಬೀಳಲಿದೆ ಎಂಬ ಕಾರಣಕ್ಕೆ ಹತಾಷೆಗೊಂಡು ಬಿಜೆಪಿ ಬಡವರಿಗೆ ಅಕ್ಕಿ ನೀಡಲು ಹಿಂದೇಟು ಹಾಕುತ್ತಿದೆ. ಪ್ರಧಾನಿ ನರೇಂದ್ರಮೋದಿ ಅವರೇನಿದ್ದರೂ ಶ್ರೀಮಂತರ ಪರ ಎಂದು ವಾಗ್ದಾಳಿ ನಡೆಸಿದರು.

ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಎಂಎಲ್ಸಿ ಜಯಮ್ಮ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ಕೆ.ಎಂ.ಹಾಲಸ್ವಾಮಿ, ಆರ್.ಕೃಷ್ಣಮೂರ್ತಿ, ಮುಖಂಡರಾದ ಜಿ.ಎಸ್.ಮಂಜುನಾಥ್, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಎನ್.ಡಿ.ಕುಮಾರ್, ಬಿ.ಟಿ.ಜಗದೀಶ್, ಅಂಜಿನಪ್ಪ, ಓ.ಶಂಕರ್, ಶಶಿಧರ್, ಅಶೋಕ್‌ನಾಯ್ಡು, ಕಂದಿಕೆರೆ ಸುರೇಶ್‌ಬಾಬು, ನಗರಸಭೆ ಸದಸ್ಯರಾದ ಡಿ.ಮಲ್ಲಿಕಾರ್ಜುನ್, ರಮೇಶ್‌ಗೌಡ, ರಾಘವೇಂದ್ರ, ಮುನಿರಾ ಮುಕಂದರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net