ಪಂಚ ಅಭಿಯಾನ ಕಾರ್ಯಕ್ರಮ ಅನುಷ್ಠಾನಗೊಳಿಸಿ

26M.D.R.3
ಮದ್ಸದೂರಿನಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಪಶು ವೈದ್ಯಾಧಿಕಾರಿ ಡಾ.ನಾಗರಾಜು ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
Published on

ಮದ್ದೂರು: ಪಂಚ ಅಭಿಯಾನದ ವಿಶೇಷ ಕಾರ್ಯಕ್ರಮಗಳನ್ನು ನಿಗದಿತ ಕಾಲಾವಧಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಲು ತಾಲೂಕು ಮಟ್ಟದ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಹೇಳಿದರು.


ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ತಡ ಮಾಡಬಾರದು. ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ಜಲಸಂಜೀವಿನಿ ಮೇಲುಸ್ತರ ಕಾಮಗಾರಿಗಳ ಅನುಷ್ಠಾನ, ವಿಪತ್ತು ನಿರ್ವಹಣೆ ಹಾಗೂ ಗೋಮಾಳ ಅಭಿವೃದ್ಧಿ ಅಭಿಯಾನದಡಿ ದಿಬ್ಬದಿಂದ ಕಣಿವೆ ಮಾದರಿಯಲ್ಲಿ ವೈಜ್ಞಾನಿಕ ವಿಧಾನದಲ್ಲಿ ಕಾಮಗಾರಿ ಅನುಷ್ಠಾನ ಮಾಡಬೇಕು ಮತ್ತು ನೈಸರ್ಗಿಕ ಮಾದರಿಯಲ್ಲಿ ಗೋಮಾಳ ಅಭಿವೃದ್ಧಿ ಪಡಿಸಬೇಕು. ಸಾರ್ವಜನಿಕ ಆಸ್ತಿ ಸಂರಕ್ಷಣೆ, ಜಾನುವಾರು ಮತ್ತು ಪ್ರಾಣಿ ಸಂಕುಲ ಬೆಳವಣಿಗೆ ಹಾಗೂ ಪ್ರಾಣಿಗಳ ಉತ್ಪನ್ನ ಹೆಚ್ಚಳವನ್ನು ಆರ್ಥಿಕ ವರ್ಷದ ಅಂತ್ಯದವರೆಗೆ ಅನುಷ್ಠಾನಗೊಳಿಸಬೇಕು ಎಂದರು.


ಕೋಟಿ ವೃಕ್ಷ ಅಭಿಯಾನದಡಿ (ಒಂದು ಕೋಟಿ) ಸರ್ಕಾರಿ, ಕೃಷಿಯೇತರ, ಬರಡು, ಸಾರ್ವಜನಿಕ ಭೂಮಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಿನಿ ಅರಣ್ಯ ನಿರ್ಮಾಣ ಹಾಗೂ ನಗರ ಮಾದರಿಯಲ್ಲಿ ಪಾದಚಾರಿಗಳ/ರಸ್ತೆಗಳ ಬದಿಯಲ್ಲಿ ಸಾರ್ವಜನಿಕ ಸ್ಥಳ, ಸಂಸ್ಥೆಗಳಲ್ಲಿ ಗ್ರಾಮದ ಒಳಗಡೆ ಆರಂಭದಿಂದ ಮುಕ್ತಾಯಗೊಳ್ಳುವರೆಗೆ 6-8 ಅಡಿಯ ಸಸಿಗಳನ್ನು ನೆಡುವುದು ಮತ್ತು ವಾಚ್ ಆ್ಯಂಡ್ ವಾರ್ಡ್ ಯೋಜನೆಯಡಿ ಮುಂದಿನ 2 ವರ್ಷಕ್ಕೆ ಸಸಿಗಳನ್ನು ಸಂರಕ್ಷಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.


ತಾಪಂ ಆಡಳಿತಾಧಿಕಾರಿ ಧನರಾಜ್ ಬೋಳಾರೆ ಮಾತನಾಡಿ, ಕೊಳವೆಬಾವಿಗಳ ಪುನಶ್ಚೇತನ ಅಭಿಯಾನದಡಿ ಅಂತರ್ಜಲ ಮಟ್ಟ ಕುಸಿತಗೊಂಡಿರುವ ಕೊಳವೆ ಬಾವಿಗಳ ಪುನಶ್ಚೇತನ, ಜೈವಿಕ ಅನಿಲ ಅಭಿಯಾನದಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಜಾನುವಾರು ಕೊಟ್ಟಿಗೆಗಳ ಪ್ಯಾಕೇಜ್ ಜತೆಯಲ್ಲಿ ಹಾಗೂ ಹಸಿರು ಸರೋವರ ಅಭಿಯಾನಗಳನ್ನು ಆ.10 ರೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net