ಪಂಕ್ತಿ ಸೇವೆಗಾಗಿ ನ್ಯಾಯಾಂಗ ಹೋರಾಟ ಮುಂದುವರಿಯಲಿದೆ

16--kollegalphoto-7,,,,
Published on

ಕೊಳ್ಳೇಗಾಲ: ಪಾರಂಪರಿಕ ಚಿಕ್ಕಲ್ಲೂರು ಜಾತ್ರೆ ಪಂಕ್ತಿ ಸೇವೆಯನ್ನು ಪ್ರತಿ ವರ್ಷವೂ ಆಚರಣೆ ಮಾಡುವ ನಿಟ್ಟಿನಲ್ಲಿ ನ್ಯಾಯಾಂಗ ಹೋರಾಟ ಮುಂದುವರಿಸುತ್ತೇವೆ ಎಂದು ಸಾಹಿತಿ ಮಹಾದೇವ ಶಂಕನಪುರ ಹೇಳಿದರು.

ಚಿಕ್ಕಲ್ಲೂರು ಸಿದ್ದಪ್ಪಾಜಿ ಗದ್ದುಗೆ ಆವರಣದಲ್ಲಿ ಗುರುವಾರ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಜಾತ್ರೆಯ ಪಂಕ್ತಿ ಸೇವೆ ಆಚರಣೆ ವಿಚಾರದಲ್ಲಿ ವಿವಾದ ಎದ್ದಿದೆ. ಕೋರ್ಟ್ ಮೆಟ್ಟಲೇರಿದ್ದ ಪರಂಪರೆ ರಕ್ಷಣಾ ಹೋರಾಟ ಸಮಿತಿಯವರು ಮಧ್ಯಂತರ ಆದೇಶ ಪಡೆಯುವಲ್ಲಿ ಯಶ ಕಂಡಿದ್ದಾರೆ. ಈ ಬಾರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳು ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಿವೆ. ಸಮಿತಿಯ ಕೋರಿಕೆಗೂ ಮಾನ್ಯತೆ ನೀಡಿವೆ ಎಂದರು.

ಸಮಿತಿ ಅಧ್ಯಕ್ಷ ಉಗ್ರ ನರಸಿಂಹಗೌಡ ಮಾತನಾಡಿ, ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇರುವ ಮಂಟೇಸ್ವಾಮಿ ಒಕ್ಕಲಿನವರನ್ನು ಸಂಘಟಿಸಿ ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ. ತಾಲೂಕು ಮಟ್ಟದ ಸಭೆಗಳನ್ನು ನಡೆಸುತ್ತೇವೆ. ಈ ವಿಷಯದಲ್ಲಿ ಜಿಲ್ಲೆಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಮತ್ತು ಸಿಎಂಗೂ ಮನವಿ ಮಾಡಿದ್ದು, ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಸಮಿತಿ ವತಿಯಿಂದ ತಂಬೂರಿ ಕಲಾವಿದ ಹುತ್ತೂರು ಬಿಸಿಲಪ್ಪ ನಾಯಕ ಹಾಗೂ ಸಂಶೋಧಕ ಡಾ.ಲಿಂಗಪ್ಪ ಮಟ್ಟೇದರ ಅವರನ್ನು ಗೌರವಿಸಲಾಯಿತು. ಸಮಿತಿಯ ಕಾರ್ಯದರ್ಶಿ ಶಂಭುಲಿಂಗ ಸ್ವಾಮಿ, ಉಪಾಧ್ಯಕ್ಷ ಮಹದೇವ ಪ್ರಸಾದ್, ಸದಸ್ಯರಾದ ಶಿವ ಲಿಂಗೇಗೌಡ, ರಾಮೇಗೌಡ, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಹಿರಿಯ ರಂಗಕರ್ಮಿ ಸಿ.ಬಸಲಿಂಗಯ್ಯ, ಹಿರಿಯ ಸಾಹಿತಿ ಕಾಳೇಗೌಡ ನಾಗವಾರ, ಸ್ವಾಮಿ ಆನಂದ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net