

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಬಸವಶಾಂತಿ ಮಿಶನ್ ಟ್ರಸ್ಟ್ ನೀಡುವ ‘ಬಸವ ಶಾಂತಿ’ ಪ್ರಶಸ್ತಿಗೆ ಅಂತಾರಾಷ್ಟ್ರೀಯ ತಬಲಾ ಕಲಾವಿದ ಪಂ. ಸತೀಶ ಹಂಪಿಹೊಳಿ ಭಾಜನರಾಗಿದ್ದಾರೆ.
ಸಂಗೀತದ ಮಧುರ ನಡೆ, ಅದು ಗಾಯನವಿರಲಿ, ವಾದನವಿರಲಿ ಅದಕ್ಕೆ ಪೂರಕ ಶಕ್ತಿಯೇ ಲಯ. ವಿವಿಧ ಲಯ ವಾದ್ಯಗಳಿದ್ದರೂ ತಬಲಾ ಲಯ ವಾದ್ಯಗಳಲ್ಲಿ ಮಹತ್ವ ಪಡೆದಿದೆ. ಪರಿಶ್ರಮದಿಂದ ಸಾಧಿಸಿ, ತಬಲಾ ಕ್ಷೇತ್ರದ ಮೌಲ್ಯವನ್ನು ಹೆಚ್ಚಿಸಿರುವ ಸಾಧಕ ಪಂಡಿತ್ ಡಾ. ಸತೀಶ ಹಂಪಿಹೊಳಿ.
ಸತೀಶ ಹಂಪಿಹೊಳಿ ಅವರು ಹುಬ್ಬಳ್ಳಿಯಲ್ಲಿ 1965ರಲ್ಲಿ ಜನಿಸಿದರು. ತಂದೆ ದತ್ತಾತ್ರೇಯ, ತಾಯಿ ಸರಸ್ವತಿ ಬಾಯಿ. ಇವರು ಬೆಳಗಾವಿ ಜಿಲ್ಲೆಯ ಹಂಪಿಹೊಳಿಯ ಸಾಂಪ್ರದಾಯಿಕ ಕುಟುಂಬದವರು. ಆರಂಭದಲ್ಲಿ ಪಂಡಿತ್ ಎಂ.ಎನ್. ಕಸ್ತೂರಿ ಅವರಲ್ಲಿ ಶಾಸೀಯವಾಗಿ ತಬಲಾ ಕಲಿಯಲು ಆರಂಭಿಸಿದರು. ನಂತರ ಧಾರವಾಡದ ಪ್ರಸಿದ್ಧ ತಬಲಾ ವಾದಕ ಪಂ. ಬಸವರಾಜ ಬೆಂಡಿಗೇರಿ ಅವರಲ್ಲಿ ಹೆಚ್ಚಿನ ಮಾರ್ಗದರ್ಶನ ಪಡೆದರು.
1994ರಲ್ಲಿ ‘ಸದ್ಗುರು ಮ್ಯೂಸಿಕ್ ಅಕಾಡೆಮಿ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ತಬಲಾ ತರಬೇತಿ ನೀಡಿ ಹಲವಾರು ಪ್ರತಿಭೆಗಳನ್ನು ತಯಾರುಗೊಳಿಸಿದ್ದಾರೆ. 30 ವರ್ಷಗಳ ಅಪರಿಮಿತ ಸಾಧನೆಯನ್ನು ಪರಿಗಣಿಸಿ ವಿಶ್ವೇಶ್ವರಯ್ಯ ನವರತ್ನ, ತಬಲಾ ನಾಥ್ ಸಾಧಕ, ಗಾನಭಾರತಿ ಸಂಗೀತ ಸೇವಾ ಪುರಸ್ಕಾರ, ರಂಗ ಕಲಾಶ್ರೀ, ನಾದೂಪಾಸಕ, ಕರ್ನಾಟಕ ಭಾರತ ರಸಾ ಗಂಗಾಧರ, ಸಂಗೀತಧಾಮ ಕೌಸ್ತುಭ, ನಾದ ಸೌರಭ ಹಾಗೂ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ, ಕಲಾತಪಸ್ವಿ, ಪುಟ್ಟಶ್ರೀ, ಲಯ ಸಂಸ್ಕಾರ, ಆತ್ರೇಯ ಕಲಾಭೂಷಣ, ಸುರ್ ಸಂಗೀತ್ ಸಾಧಕ್, ಪಂಚಾಕ್ಷರ ಕೃಪಾಭೂಷಣ, ನಾದ ಸರಸ್ವತಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
* ಪ್ರಶಸ್ತಿ ಪ್ರದಾನ 11ಕ್ಕೆ: ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ನಿಡವಣಿ ಬಡಾವಣೆಯ ಸೌಹಾರ್ದ ಸಮುದಾಯ ಭವನದಲ್ಲಿ ಡಿ. 11ರಂದು ಬೆಳಗ್ಗೆ 10.30ಕ್ಕೆ ಮಾನವ ಏಕತಾ ಸಂಗೀತ ಸಮಾವೇಶ ಮತ್ತು ‘ಬಸವಶಾಂತಿ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ತಬಲಾ ಕಲಾವಿದ ಪಂ. ಸತೀಶ ಹಂಪಿಹೊಳಿ ಅವರಿಗೆ ‘ಬಸವಶಾಂತಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.