ಪಂ. ರಘುನಾಥಗೆ ಪುಟ್ಟರಾಜ ಸಮ್ಮಾನ್

1 vikram 3 (Pt. Raghunath Nakod)
Published on

ಧಾರವಾಡ: ನಗರದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನವು ಸಂಗೀತ ಕ್ಷೇತ್ರದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ನೀಡುವ ಪುಟ್ಟರಾಜ ಸಮ್ಮಾನ್ -2020ನೇ ಸಾಲಿನ ಪ್ರಶಸ್ತಿಗೆ ಪ್ರಸಿದ್ಧ ತಬಲಾ ವಾದಕ ಪಂ. ರಘುನಾಥ ನಾಕೋಡ ಭಾಜನರಾಗಿದ್ದಾರೆ.

ಪ್ರಶಸ್ತಿಯು ಸಮ್ಮಾನ ಪತ್ರ, ಒಂದು ಲಕ್ಷ ರೂ. ನಗದು ಒಳಗೊಂಡಿದ್ದು, ಮಾ. 3ರಂದು ಸಂಜೆ 6 ಗಂಟೆಗೆ ಸೃಜನಾ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಪಂ. ಮಾರುತಿ ನಾವಲಗಿ ಶಹನಾಯಿ ವಾದನದ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಉಸ್ತಾದ ನಿಸ್ಸಾರ ಅಹ್ಮದ ತಬಲಾ ಸಾಥ್ ನೀಡಲಿದ್ದಾರೆ.

ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಗೀತಗಾರ ಪಂ. ವಿನಾಯಕ ತೊರವಿ ಅತಿಥಿಯಾಗಿ ಆಗಮಿಸುವರು. ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸುವರು. ಡಾ. ಎಂ. ವೆಂಕಟೇಶಕುಮಾರ, ಪಂ. ಡಿ. ಕುಮಾರದಾಸ ಇತರರು ಉಪಸ್ಥಿತರಿರುವರು.

ಪ್ರಶಸ್ತಿ ಪ್ರದಾನದ ನಂತರ ಪಂ. ರಘುನಾಥ ನಾಕೋಡ ತಬಲಾ ಸೋಲೋ ಕಾರ್ಯಕ್ರಮ ನಡೆಯಲಿದೆ. ಶಂಕರ ಕಬಾಡಿ ಲೆಹರಾ ಸಾಥ್ ನೀಡುವರು.

ಪಂ. ರಘುನಾಥ ನಾಕೋಡ: ದೇಶದ ಅಪ್ರತಿಮ ತಬಲಾ ಕಲಾವಿದರ ಸಾಲಿನಲ್ಲಿ ಪಂ. ರಘುನಾಥ ನಾಕೋಡ ಸಹ ಒಬ್ಬರು. ನಾಡು ಕಂಡ ಸುಪ್ರಸಿದ್ಧ ಗಾಯಕ ಪಂ. ಅರ್ಜುನಸಾ ನಾಕೋಡರ ಹಿರಿಯ ಮಗ. ಇವರದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರ ಮನೆತನ. ನಾಕೋಡರ ಮನೆತನದ ಎಲ್ಲರೂ ಸಂಗೀತ ಕ್ಷೇತ್ರದಲ್ಲಿ ತೊಡಗಿದ್ದಾರೆ.

ಪಂ. ರಘುನಾಥ ನಾಕೋಡರು ತಬಲಾ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದರು. ಪಂ. ವೀರಣ್ಣ ಕಾಮಕರ ಅವರಿಂದ ತಬಲಾ ವಾದನ ಪ್ರಾಥಮಿಕ ತರಬೇತಿ ಆರಂಭಿಸಿ, ಬಸವರಾಜ ಬೆಂಡಿಗೇರಿ ಅವರಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಉದಯೋನ್ಮುಖ ಕಲಾವಿದರಾದರು. ಮುಂದೆ ತಬಲಾ ಮಾಂತ್ರಿಕ ಉಸ್ತಾದ ದಾವೂದ ಖಾನ್ ಹಾಗೂ ಶಬ್ಬೀರ ದಾವೂದ ಖಾನರಲ್ಲಿ ಮಾರ್ಗದರ್ಶನ ಪಡೆದು ಪ್ರಬುದ್ಧ ಕಲಾವಂತಿಕೆ ಪಡೆದರು. ಕರ್ನಾಟಕದಿಂದ ಆಕಾಶವಾಣಿಯ ಉಚ್ಚ ಶ್ರೇಣಿಯ ತಬಲಾ ಕಲಾವಿದ ಎನಿಸಿಕೊಂಡವರಲ್ಲಿ ಪಂ. ರಘುನಾಥ ನಾಕೋಡ ಮೊದಲಿಗರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net