ಪಂ.ಪುಟ್ಟರಾಜ ಕವಿ ಗವಾಯಿಗಳಿಗೆ ಸರ್ಕಾರ ನೀಡಲಿ ಭಾರತರತ್ನ ಪ್ರಶಸ್ತಿ

IMG_20220917_125129.jpg
Published on

ದಾವಣಗೆರೆ: ಕೇಂದ್ರ ಸರ್ಕಾರ, ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕು. ಹಾಗಾದಾಗ ಮಾತ್ರ ಈ ಪ್ರಶಸ್ತಿಗೆ ಕಿಮ್ಮತ್ತು ಬರಲಿದೆ ಎಂದು ಗದಗ್‌ನ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಕಲ್ಲಜ್ಜಯ್ಯ ಹೇಳಿದರು.

ಹೊರವಲಯದ ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂ. ಪಂ. ಪಂಚಾಕ್ಷರ ಗವಾಯಿಗಳು, ಲಿಂ.ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಪುಣ್ಯ ಸ್ಮರಣೆ ಹಾಗೂ 262ನೇ ಅನಂತ ಹುಣ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹಾಲಿ-ಮಾಜಿ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಈ ಬಗ್ಗೆ ನಿರ್ಣಯಿಸಿದಲ್ಲಿ ಗವಾಯಿಗಳ ಕೋಟ್ಯಂತರ ಶಿಷ್ಯವರ್ಗಕ್ಕೆ ಖುಷಿ ತರಲಿದೆ ಎಂದು ಸರ್ಕಾರಗಳಿಗೆ ಕಿವಿಮಾತು ಹೇಳಿದರು. ಗದಗ್ ಪುಣ್ಯಾಶ್ರಮದ ಸುತ್ತಲಿದ್ದ 100ಕ್ಕೂ ಹೆಚ್ಚು ಮನೆಗಳು ತೆರವಾಗಿದ್ದು, ಅಲ್ಲಿ 2 ಸಾವಿರ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಹಾಗೂ ಪ್ರಸಾದ ನಿಲಯ ಸ್ಥಾಪಿಸಲಾಗುತ್ತಿದೆ. ಜೂನ್‌ನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ತೇರನ್ನು ಎಳೆಯಲಾಗಿದೆ. ಈಗಾಗಲೆ ಸುಮಾರು 90 ಲಕ್ಷ ರೂ. ವೆಚ್ಚದ 45 ಅಡಿ ಎತ್ತರದ ಗೋಪುರ ಕಾಮಗಾರಿ ಅಂತಿಮಗೊಳ್ಳುತ್ತಿದ್ದು ಮುಂದಿನ ವರ್ಷದ ಜಾತ್ರೆ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು. ಎರೇಕುಪ್ಪಿ ಹಿರೇಮಠದ ತಿಪ್ಪಯ್ಯ ಸ್ಮರಣಾರ್ಥವಾಗಿ ನೀಡುವ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಈ ವರ್ಷದ ಶ್ರೀ ಗುರು ಪುಟ್ಟರಾಜ ಪುರಸ್ಕಾರವನ್ನು ಧಾರವಾಡದ ಹಿಂದೂಸ್ತಾನಿ ಕಲಾವಿದ ಪಂಡಿತ ಡಿ. ಕುಮಾರದಾಸ ಅವರಿಗೆ ನೀಡಿ ಗೌರವಿಸಲಾಯಿತು. ನಂತರ ಅವರಿಂದ ಗಾನಸುಧೆ ನಡೆಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಆರ್.ಬಿ. ಸಂಗಮೇಶ್ವರ ಗವಾಯಿ, ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಎಚ್.ಶಿವಮೂರ್ತಿಸ್ವಾಮಿ, ಟಿ.ಕೆ. ಕರಿಬಸಪ್ಪ, ನಾಗರತ್ನಮ್ಮ, ಎ.ಎಸ್.ಮೃತ್ಯುಂಜಯ, ಶಿವಬಸವಸ್ವಾಮಿ ಚರಂತಿಮಠ, ಸಿದ್ದೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net