ಪ ಪಂ ಸಾಮಾನ್ಯ ಸಭೆ; ಸದಸ್ಯರು ಗೈರು

ಪ ಪಂ ಸಾಮಾನ್ಯ ಸಭೆ; ಸದಸ್ಯರು ಗೈರು
Published on

ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆಯಬೇಕಿದ್ದ ಪಪಂ ಸಾಮಾನ್ಯ ಸಭೆಯನ್ನು ಕೋರಂ ಕೊರತೆಯಿಂದ ಮುಂದೂಡಲಾಯಿತು.


ಬೆಳಗ್ಗೆ 11.30ಕ್ಕೆ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಅಧ್ಯಕ್ಷತೆಯಲ್ಲಿ ಸಭೆ ಏರ್ಪಾಡಾಗಿತ್ತು. ಅಧ್ಯಕ್ಷರು ಮತ್ತು ಸದಸ್ಯ ರಮೇಶ್ ವಾಟಾಳ್ ಅವರನ್ನು ಹೊರತು ಪಡಿಸಿ ಉಳಿದ ಯಾವುದೇ ಸದಸ್ಯರು ಸಭೆಗೆ ಹಾಜರಾಗಲಿಲ್ಲ. ಸದಸ್ಯರ ಬರುವಿಕೆಗಾಗಿ ಅರ್ಧಗಂಟೆ ಕಾದ ಬಳಿಕ ಸಭೆಯನ್ನು ಮುಂದೂಡುತ್ತಿರುವುದಾಗಿ ಅಧ್ಯಕ್ಷೆ ಶಾರದಾ ಪ್ರಕಟಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಪಂ ಸ್ಥಾಯಿ ಸಮಿತಿ ಅವಧಿ ಜ. 17ಕ್ಕೆ ಮುಕ್ತಾಯಗೊಂಡಿದೆ. ಸಮಿತಿ ರಚನೆ ಮಾಡಿ ಸದಸ್ಯರ ಆಯ್ಕೆ ಮಾಡಬೇಕಿತ್ತು. ಸದಸ್ಯರ ಎರಡು ಗುಂಪುಗಳು ಇದ್ದು ಇಬ್ಬರೂ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ತಾವು ಅಧ್ಯಕ್ಷರಾಗಿದ್ದು ಎಲ್ಲ ಸದಸ್ಯರನ್ನೂ ಸಮಾನವಾಗಿ ಕಾಣಬೇಕಿದೆ ಹೀಗಾಗಿ ನೀವೆ ಒಗ್ಗೂಡಿ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ್ದೆ, ಈ ಹಿನ್ನೆಲೆಯಲ್ಲಿ ಸದಸ್ಯರು ಗೈರಾಗಿರಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಸಾಮಾನ್ಯ ಸಭೆ ನಡೆದು ನಾಲ್ಕು ತಿಂಗಳಾಗಿದೆ. ಪಟ್ಟಣದ ಹಲವು ವಿಷಯಗಳ ಕುರಿತು ಚರ್ಚೆ ನಡೆಯಬೇಕಿತ್ತು. ಸದಸ್ಯರು ಸಭೆಯಲ್ಲಿ ಭಾಗವಹಿಸಿ ಚರ್ಚೆಯ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದಿತ್ತು. ಸಭೆಗೆ ಗೈರಾಗಿ ಸಭೆ ಮುಂದೂಡುವಂತೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net