ನ್ಯೂನ್ಯತೆಯ ಚಿಂತೆಯಲ್ಲೇ ಕಾಲಹರಣ ಸರಿಯಲ್ಲ, ಕೀಳರಿಮೆ ಬಿಟ್ಟು ಉತ್ತಮ ಸಾಧನೆ ತೋರಿ

3CBP2 B
Published on

ಚಿಕ್ಕಬಳ್ಳಾಪುರ: ಅಂಗವಿಕಲರು ಕೀಳರಿಮೆ ಬಿಟ್ಟು ಉತ್ತಮ ಸಾಧನೆ ತೋರುವ ಮೂಲಕ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್ ಸಲಹೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಸ್ವಯಂಸೇವಾ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರು ಎಲ್ಲ ಕ್ಷೇತ್ರಗಳಲ್ಲೂ ವಿಶೇಷ ಸಾಧನೆ ತೋರುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆಯೂ ಕೆಲವರು ಕೀಳರಿಮೆಯಿಂದ ಬೆಳಕಿಗೆ ಬರುತ್ತಿಲ್ಲ. ಅಂತಹವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕಿದೆ, ಈ ನಿಟ್ಟಿನಲ್ಲಿ ಪಾಲಕರು ಬಾಲ್ಯದಿಂದಲೇ ಅಂಗವಿಕಲ ಮಕ್ಕಳಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಬೆಳೆಸಬೇಕು ಎಂದು ಸಲಹೆಯಿತ್ತರು.

ಅಂಗವಿಕಲರು ಸಮಸ್ಯೆಗಳ ಚಿಂತೆಯಲ್ಲಿ ಕಾಲಹರಣ ಮಾಡುವುದು ಸರಿಯಲ್ಲ, ಮೊದಲು ಅಂಜಿಕೆ ಬಿಡಬೇಕು, ನಿಯಮಾನುಸಾರ ಸವಲತ್ತುಗಳು ಸಿಗದಿರುವಿಕೆ, ಶೋಷಣೆ ಮತ್ತು ಸಮಸ್ಯೆಗಳು ಉಂಟಾದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ನೆರವು ಪಡೆಯಬಹುದು ಎಂದರು.

ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಜಿಲ್ಲಾಡಳಿತವು ಅಂಗವಿಕಲರ ಕುಂದುಕೊರತೆಗಳನ್ನು ಆಲಿಸಲು ವಿಶೇಷ ಆದ್ಯತೆ ನೀಡಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ತಿಳಿಸಿದರು. ಅಂಗವಿಕಲರ ಕಲ್ಯಾಣಕ್ಕೆ ವಿವಿಧ ಇಲಾಖೆಗಳ ಮೂಲಕ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಜತೆಗೆ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲಾಗುತ್ತಿದ್ದು, ಈ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಪ್ರತಿ ಇಲಾಖೆಯಲ್ಲೂ ನಿಯಮಾನುಸಾರ ಅನುದಾನವನ್ನು ಅಂಗವಿಕಲರಿಗೆ ಮೀಸಲಿಟ್ಟು ಹೆಚ್ಚಿನ ಸವಲತ್ತು ಒದಗಿಸುವಂತಾಗಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಲವರಿಗೆ ಸನ್ಮಾನ: ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಈ.ಸುನೀಲ್(ಚಿಕ್ಕಬಳ್ಳಾಪುರ), ಲಕ್ಷ್ಮಮ್ಮ (ಶಿಡ್ಲಘಟ್ಟ), ಲಕ್ಷ್ಮೀನಾರಾಯಣ (ಗುಡಿಬಂಡೆ), ಪ್ರಭಾಕರ್ (ಬಾಗೇಪಲ್ಲಿ), ಮುನಿಕೃಷ್ಣ (ಗೌರಿಬಿದನೂರು)ಅವರನ್ನು ಸನ್ಮಾನಿಸಲಾಯಿತು. ಅಂಗವಿಕಲರಿಗೆ ಇಲಾಖೆಯ ಕಾರ್ಯಕ್ರಮಗಳು ಮತ್ತು ಸವಲತ್ತುಗಳು ಬಗ್ಗೆ ಅರಿವು ಮೂಡಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ನಾರಾಯಣಸ್ವಾಮಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜ್ಯೋತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ ಉಸ್ಮಾನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೌತಾಜ್, ವಕೀಲ ಪಿ.ಎ.ಬಾಬಾ ಫಕೃದ್ದೀನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net