

ಹನೂರು: ಶಿಬಿರದಲ್ಲಿ ವಿಶೇಷ ಅಗತ್ಯತೆವುಳ್ಳ ಮಕ್ಕಳ ನ್ಯೂನತೆ ಗುರುತಿಸಿ, ಅದಕ್ಕೆ ಪೂರಕವಾದ ಸಾಧನ-ಸಲಕರಣೆಗಳನ್ನು ನೀಡಲಾಗುವುದು ಎಂದು ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಮಂಜುನಾಥ್ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಬೆಂಗಳೂರಿನ ಅಲಿಂಕೋ ಸಂಸ್ಥೆ ವತಿಯಿಂದ ಅಂಗವಿಕಲ ವಿದ್ಯಾರ್ಥಿಗಳಿಗೆ ಪಟ್ಟಣದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಅಂಗವಿಕಲ ಮಕ್ಕಳಿಗೆ ಯಾವುದೇ ಸೌಕರ್ಯ ಇರಲಿಲ್ಲ. ಇದರಿಂದ ಶಿಕ್ಷಣ ಪಡೆಯಲು ತೊಂದರೆಯಾಗಿತ್ತು. ಅದರೆ ಇದೀಗ ಸರ್ಕಾರ ವಿಶೇಷ ಮಕ್ಕಳಿಗೆ ಆರೋಗ್ಯ ತಪಾಸಣೆ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಒದಗಿಸುತ್ತಿದೆ. ಕೆಲವು ಸ್ವಯಂ ಸಂಸ್ಥೆಗಳೂ ಸಹಕಾರ ನೀಡುತ್ತಿವೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತಿದೆ. ಈ ದಿಸೆಯಲ್ಲಿ ಸಮಗ್ರ ಕರ್ನಾಟಕ ಯೋಜನೆಯಡಿ ವಿಶೇಷ ಮಕ್ಕಳಿಗೆ ಸಮನ್ವಯ ಶಿಕ್ಷಣವನ್ನೂ ಜಾರಿಗೊಳಿಸಲಗಿದೆ ಎಂದರು.
ಶೈಕ್ಷಣಿಕ ವಲಯ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ತಲಾ 10 ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಪ್ರತಿ ಬ್ಲಾಕ್‌ನಲ್ಲಿ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷ ಮಕ್ಕಳಲ್ಲಿ 21 ನ್ಯೂನತೆಯನ್ನು ಗುರುತಿಸಲಾಗಿದ್ದು, ವೈದ್ಯಕೀಯ ತಪಾಸಣೆ ನಡೆಸಿ ಪೂರಕ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಶೇ.60ರಷ್ಟು ಅಲಿಂಕೋ ಸಂಸ್ಥೆ ನೀಡಿದರೆ, ಶೇ.40 ರಷ್ಟು ಅನುದಾನವನ್ನು ಸರ್ಕಾರ ನೀಡಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಮಾತನಾಡಿದರು. ಬಳಿಕ ಅಂಗವಿಕಲ ಮಕ್ಕಳಿಗೆ ವೈದ್ಯಕೀಯ ತಪಾಸಣೆ ನಡೆಸಲಾ ಯಿತು. ಬಿಇಒ ಶಿವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ್, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಶಿಬಿರದ ನೋಡೆಲ್ ಅಧಿಕಾರಿ ಕೃಷ್ಣ, ಶಾಲಾ ಶಿಕ್ಷಕರ ವಿವಿಧ ಸಂಘದ ಅಧ್ಯಕ್ಷರಾದ ಗಿರೀಶ್, ಶಿವಮಲ್ಲು, ಅಮಲ್‌ದಾಸ್, ಅಲಿಂಕೋ ಸಂಸ್ಥೆಯ ಮಂಗನ್ ಸಿಂಗ್, ವೈದ್ಯರಾದ ನಿಖಿತ್, ಉಮೇಶ್, ರಾಜೇಶ್ ಇತರರಿದ್ದರು.