

ಚಿತ್ರದುರ್ಗ: ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ 2023ರ ಭಗವಾನ್ ಬುದ್ದ ನ್ಯಾಷನಲ್ ಫಿಲೋಶಿಪ್ ಪ್ರಶಸ್ತಿಗೆ ನಿವೃತ್ತ ಪಿಎಸ್‌ಐ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಭೀಮಾರೆಡ್ಡಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ. 10 ಮತ್ತು 11 ರಂದು ನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿ ಉಪ ರಾಷ್ಟ್ರಪತಿ ಜಗದೀಶ್ ಧನ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಕರೋನಾ ಅವಧಿಯಲ್ಲಿ ಸೋಂಕಿತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ, ಔಷಧ ತಂದುಕೊಡುವ, ಆಹಾರ ವಿತರಿಸುವ, ಮೃತಪಟ್ಟವರ ಅಂತ್ಯಕ್ರಿಯೆಯನ್ನು ಆಯಾ ಜಾತಿ-ಧರ್ಮದ ಅನುಸಾರ ಮಾಡಿ ಫ್ರಂಟ್‌ಲೈನ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನಿವೃತ್ತಿ ನಂತರ ನಮ್ಮ ಸಂಘ ಸೇರಿ ಹಲವು ಸಂಘಗಳಿಗೆ ಸದಸ್ಯರಾಗಿದ್ದಾರೆ. ಈಗಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಸಮಾಜದಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಜಿಲ್ಲಾಡಳಿತ, ಸರ್ಕಾರ ಕೂಡ ಇವರ ಸೇವೆ ಗುರುತಿಸಿ ಸನ್ಮಾನಿಸಿದೆ ಎಂದು ಹೇಳಿದರು.
ನಿವೃತ್ತ ಪಿಎಸ್‌ಐ ನಾಗರಾಜ್ ಮಾತನಾಡಿ, ನನ್ನ ಕಾರ್ಯವೈಖರಿ ಮೆಚ್ಚಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸದ ವಿಚಾರ. ಈ ಮೂಲಕ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ. ಸಾಮಾಜಿಕ ಸೇವೆಯಲ್ಲೇ ಜೀವನ ಸಾರ್ಥಕಗೊಳಿಸಿಕೊಳ್ಳಲು ಮುಂದಾಗಿದ್ದೇನೆ ಎಂದರು.
ಹನುಮಂತಪ್ಪ, ರಾಜಪ್ಪ, ಯೂಸೆಫ್ ಇತರರಿದ್ದರು.