ಗುಬ್ಬಿ: ಜಮೀನಿನ ವ್ಯಾಜ್ಯ ಸಂಬಂಧ ಬುಧವಾರ ನ್ಯಾಯಾಲಯಕ್ಕೆ ಬಂದಿದ್ದ ಕಕ್ಷಿದಾರರೊಬ್ಬರು ನ್ಯಾಯಾಲಯದ ಆವರಣದಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಚೇಳೂರು ಹೋಬಳಿ ಕಚ್ಚೇನಹಳ್ಳಿಯ ರಮೇಶ್ (55) ಮೃತ. ಚೇಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ರಮೇಶ್ ನ್ಯಾಯಾಲಯದಲ್ಲಿ ವಿಚಾರಣೆ ಇದ್ದ ಕಾರಣ ಬೆಳಗ್ಗೆಯೇ ಬಂದು ನ್ಯಾಯಾಲಯದ ಆವರಣದಲ್ಲಿ ಕುಳಿತಿದ್ದರು ಎನ್ನಲಾಗಿದೆ. ನ್ಯಾಯಾಲಯದ ಕಲಾಪಗಳು ಪ್ರಾರಂಭಗೊಂಡಾಗ ಒಳಗೆ ಹೋಗುವ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಜನರು ಹಾಗೂ ವಕೀಲರು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಯಿತು.