

ಚಿಕ್ಕಬಳ್ಳಾಪುರ: ಪ್ರಥಮ ದರ್ಜೆ ಕಾಲೇಜುಗಳಿಗೆ ನಿರ್ಬಂಧದ ನಡುವೆಯೂ ಅನೇಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದು, ನ್ಯಾಯಾಲಯದ ಆದೇಶ ಪಾಲಿಸುವಂತೆ ಮನವೊಲಿಸುವಲ್ಲಿ ಉಪನ್ಯಾಸಕರು ಹರಸಾಹಸ ಪಡುವಂತಾಯಿತು.
ಮೊದಲಿನಿಂದಲೂ ಹಿಜಾಬ್ ಧರಿಸಿದರೂ ಯಾರೂ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಆದರೆ, ಇದೀಗ ಅನವಶ್ಯಕವಾಗಿ ತಡೆಯಲಾಗುತ್ತಿದೆ ಎಂದು ಹಲವು ವಿದ್ಯಾರ್ಥಿನಿಯರು ವಾದಿಸಿದರು. ಇದಕ್ಕೆ ಉಪನ್ಯಾಸಕರು ನಿಯಮವನ್ನು ಪಾಲಿಸಲು ಸಲಹೆ ನೀಡಿದರು. ಆದರೂ ಪಟ್ಟು ಬಿಡದ ಅನೇಕರು ಹಿಜಾಬಿನೊಂದಿಗೆ ಕೆಲ ಕಾಲ ಕುಳಿತು, ಮತ್ತೆ ವಾಪಸ್ಸಾದರು.
ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಿರಲು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರೌಢಶಾಲೆಯ ಮಾದರಿಯಲ್ಲಿ ಕಾಲೇಜುಗಳ ಆವರಣದಲ್ಲೂ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಹೊರತುಪಡಿಸಿ ಅನ್ಯರಿಗೆ ಪ್ರವೇಶ ನೀಡಲಿಲ್ಲ. ಮಾಧ್ಯಮದವರಿಗೂ ನಿರ್ಬಂಧ ಹೇರಲಾಗಿತ್ತು.
ಕಾಲೇಜಿನ ತರಗತಿಗಳು ಮರು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿಗಳನ್ನೊಂಡ ತಂಡವು, ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿತು. ಹಿಜಾಬ್ ಮತ್ತು ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಚೋದನಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು. ವದಂತಿ ಹಬ್ಬಿಸಿ, ಸೌಹಾರ್ದಯುತ ವಾತಾವರಣವನ್ನು ಹದಗೆಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.ಮುಂಜಾಗ್ರತಾ ಕ್ರಮವಾಗಿ ಕಾಲೇಜುಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ತಾಲೂಕು ಮತ್ತು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳಿಗೆ ಸಮವಸ್ತ್ರ ಸಂಹಿತೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಜವಾಬ್ದಾರಿ ವಹಿಸಲಾಗಿತ್ತು.