

ಪಾಂಡವಪುರ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗದಲ್ಲಿರುವ ಕೃಷಿ ಇಲಾಖೆಗೆ ಸೇರಿದ ನಿವೇಶನವನ್ನು ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಕ್ಷಿದಾರರ ತಂಗುದಾಣ ನಿರ್ಮಿಸಲು ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ಒತ್ತಾಯಿಸಿದರು.
ನ್ಯಾಯಾಲಯಕ್ಕೆ ಪ್ರತಿದಿನ ಸಾವಿರಕ್ಕೂ ಅಧಿಕ ಕಕ್ಷಿದಾರರು ಆಗಮಿಸುತ್ತಾರೆ. ಇದರಿಂದ ಕಕ್ಷಿದಾರರು, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ವಾಹನ ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿಲ್ಲ.
ನ್ಯಾಯಾಲಯದ ಮುಂಭಾಗದ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದು, ಸಾಕಷ್ಟು ತೊಂದರೆ ಎದುರಾಗುತ್ತಿದೆ. ಹೀಗಾಗಿ ಕೃಷಿ ಇಲಾಖೆಗೆ ಸೇರಿದ ನಿವೇಶನವನ್ನು ನ್ಯಾಯಾಲಯಕ್ಕೆ ಒಪ್ಪಿಸಿದರೆ ಅನುಕೂಲವಾಗುತ್ತದೆ. ಕೃಷಿ ಇಲಾಖೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪಟ್ಟಣದಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದು, ಅಲ್ಲಿ ಕಟ್ಟಡ ನಿರ್ಮಿಸಿಕೊಳ್ಳಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಟ್ಟಡ ನಿರ್ಮಾಣಕ್ಕೆ ತಡಯಾಜ್ಞೆ: ಕೃಷಿ ಇಲಾಖೆಗೆ ಸೇರಿದ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಇಲಾಖೆ ಕ್ರಮ ಕೈಗೊಂಡಿದ್ದು, ಇದನ್ನು ಪ್ರಶ್ನಿಸಿ ಪಟ್ಟಣದ ಅಪರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಕೆಯಾಗಿತ್ತು. ಅರ್ಜಿ ಪರಿಗಣಿಸಿರುವ ಘನ ನ್ಯಾಯಾಲಯವು, ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ವಿಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಕೆ.ಎನ್.ನಾಗರಾಜು, ವಕೀಲರಾದ ಮರೀಗೌಡ, ಬಿ.ಕೆ.ಪುಟ್ಟರಾಜು ಇತರರು ಇದ್ದರು.