ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

20 HANUR 4
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ನ್ಯಾಯಾಲಯ ಕಟ್ಟಡ ಸ್ಥಾಪನೆ ಸಂಬಂಧ ಬುಧವಾರ ಸಂಜೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಅವರು ಜಾಗ ಮಂಜೂರಾಗಿರುವ ಹುಲುಸುಗುಡ್ಡೆಗೆ ಆಗಮಿಸಿ ಸ್ಥಳ ಪರಿಶೀಲಿಸಿದರು.

ಹನೂರು ತಾಲೂಕು ರಚನೆಯಾದ ಬಳಿಕ ನ್ಯಾಯಾಲಯ ಸ್ಥಾಪನೆಯಾಗಿರಲಿಲ್ಲ. ಈ ಭಾಗದ ಜನರು ಕೊಳ್ಳೇಗಾಲದ ನ್ಯಾಯಾಲಯಕ್ಕೆ ತೆರಳುವಂತಾಗಿತ್ತು. ಇದರಿಂದ ಜನರು ತುಂಬ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಸರ್ಕಾರ ಕಳೆದ 2 ವರ್ಷದ ಹಿಂದೆ ಹನೂರಿಗೆ ನ್ಯಾಯಾಲಯ ಮಂಜೂರು ಮಾಡಲಾಗಿದ್ದು, ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸುತ್ತಿದೆ. ಆದರೆ ಇಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ಇದರಿಂದ ನ್ಯಾಯಾಧೀಶರು ಹಾಗೂ ಸಾರ್ವಜನಿಕರು ತುಂಬ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಮಂಗಲ ಗ್ರಾಮದ ಸರ್ವೇ ನಂಬರ್ 375 ರಲ್ಲಿ 4 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು.

ಈ ಸ್ಥಳಕ್ಕೆ ಬುಧವಾರ ನ್ಯಾಯಾಧೀಶರ ತಂಡ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿತು. ನೀಲಿ ನಕಾಶೆಯನ್ನು ವೀಕ್ಷಿಸಲಾಯಿತು. ಮಂಜೂರಾಗಿರುವ ಜಾಗವು ಹನೂರಿನಿಂದ ಹೆಚ್ಚು ಅಂತರದಲ್ಲಿದೆ. ಹಾಗಾಗಿ ಈ ಸ್ಥಳವು ಸಾರ್ವಜನಿಕರ ಅನುಕೂಲತೆಯ ಹಿತದೃಷ್ಟಿಯಿಂದ ಸೂಕ್ತವಾಗಿಲ್ಲ ಎಂದು ಭಾವಿಸಿತು. ಬಳಿಕ ಮಿನಿಸೌಧ ನಿರ್ಮಿಸಲು ಉದ್ದೇಶಿಸಿರುವ ಹುಲ್ಲೇಪುರದ ಸರ್ವೇ ನಂಬರ್ 312/ಡಿ ಮತ್ತು ಎ ಸ್ಥಳಕ್ಕೆ ತೆರಳಿದ ನ್ಯಾಯಾಧೀಶರು ಪರಿಶೀಲನೆ ನಡೆಸಿದರು.

ಈ ವೇಳೆ ನ್ಯಾಯಾಧೀಶೆ ಪ್ರಭಾವತಿ ಮಾತನಾಡಿ, ಈ ಸ್ಥಳ ಹನೂರು ಪಟ್ಟಣಕ್ಕೆ ಹತ್ತಿರದಲ್ಲಿದೆ. ಜತೆಗೆ ಮುಖ್ಯ ರಸ್ತೆಯ ಬದಿಯಲ್ಲಿದೆ. ಅಲ್ಲದೇ ಇಲ್ಲಿಯೇ ತಾಲೂಕು ಆಡಳಿತ ಸೌಧ ನಿರ್ಮಾಣವಾಗುವುದರಿಂದ ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ಉತ್ತಮ ಸ್ಥಳವಾಗಿದೆ. ಆದ್ದರಿಂದ ಈ ಸ್ಥಳದಲ್ಲಿ ನ್ಯಾಯಾಲಯ ಸ್ಥಾಪಿಸಿದರೆ ಸೂಕ್ತ ಎನ್ನಿಸಿದೆ. ಆದ್ದರಿಂದ ಈ ಬಗ್ಗೆ ಸರ್ವೇ ಕಾರ್ಯ ನಡೆಸಿ ನ್ಯಾಯಾಲಯ ಸ್ಥಾಪನೆಗೆ ಅಗತ್ಯವಿರುವ 4 ಎಕರೆ ಜಾಗ ಮಂಜೂರಾತಿ ನೀಡುವ ಬಗ್ಗೆ ಶೀಘ್ರ ಕ್ರಮವಹಿಸಿ ವರದಿ ನೀಡಬೇಕು. ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ಅನುಮತಿ ದೊರೆತ ಬಳಿಕ ನ್ಯಾಯಾಲಯ ಕಟ್ಟಡ ಹಾಗೂ ವಸತಿ ಗೃಹವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು

ತಹಸೀಲ್ದಾರ್ ಕೆ.ಎನ್ ಚೈತ್ರಾ, ಆರ್‌ಐ ಶೇಷಣ್ಣ, ಇನ್ಸ್‌ಪೆಕ್ಟರ್ ಸಿ.ಆನಂದಮೂರ್ತಿ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net