

ಕುಶಾಲನಗರ: ಕುಶಾಲನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನ್ಯಾಯಾಲಯ ಕಟ್ಟಡ ಸ್ಥಳವನ್ನು ಗುರುವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ಯಾಮಪ್ರಸಾದ್ ಪರಿಶೀಲಿಸಿದರು.
ಈಗಿರುವ ಕೋರ್ಟ್ ಕಟ್ಟಡದ ದಯನೀಯ ಸ್ಥಿತಿ ನೋಡಿ ಬೇಸರವಾಯಿತು. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ವಕೀಲರು ಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಬೇಡಿಕೆಯಂತೆ ನೂತನ ಕಟ್ಟಡ ಪಟ್ಟಣದ ಹೃದಯ ಭಾಗದಲ್ಲೇ ಆಗುತ್ತಿರುವುದು ಸಂತಸದ ವಿಚಾರ. ಕೋರ್ಟ್ ಕಟ್ಟಡ ಕಾಮಗಾರಿಗೆ ಬೇಕಾದ ಎಲ್ಲ ತಯಾರಿಗಳು ಮುಗಿದಿವೆ. ಆರ್ಥಿಕ ಇಲಾಖೆ ವತಿಯಿಂದ ಅನುಮೋದನೆ ದೊರೆತ ಕೂಡಲೇ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ನೆಲ ಮಹಡಿ ಮತ್ತು ಮೊದಲ ಅಂತಸ್ತಿನ ಕಾಮಗಾರಿ ಮಾಡುವ ಉದ್ದೇಶವಿದೆ ಎಂದು ನ್ಯಾಯಾಧೀಶ ಶ್ಯಾಮಪ್ರಸಾದ್ ತಿಳಿಸಿದರು.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು, ಖಜಾಂಚಿ ವೆಂಕಟರಮಣ ಭಟ್, ತಹಸೀಲ್ದಾರ್ ಕಿರಣ್ ಗೋರಯ್ಯ, ಆರ್.ಐ.ಸಂತೋಷ್ ಮತ್ತಿತರರು ಹಾಜರಿದ್ದರು.