

ವಿರಾಜಪೇಟೆ: ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಇಲ್ಲದಿದ್ದಲ್ಲಿ ಆಡಳಿತ ವ್ಯವಸ್ಥೆಯ ಎಲ್ಲ ಹಂತಗಳು ಕುಸಿಯುತ್ತವೆ. ಇದರಿಂದ ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಎಂ.ಪೂಣಚ್ಚ ಹೇಳಿದರು.
ನ್ಯಾಯಾಲಯದ ಆವರಣದಲ್ಲಿ ವಿರಾಜಪೇಟೆ ವಕೀಲರ ಸಂಘದಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ 10 ವರ್ಷದ ಹಿಂದೆ ನಾನು ಕೂಡ ವಿರಾಜಪೇಟೆ ನ್ಯಾಯಾಲಯದಲ್ಲಿ ವಕೀಲನಾಗಿ ಕಾರ್ಯನಿವಹಿಸುತ್ತಿದ್ದೆ. ವಕೀಲರ ಸಂಘದಲ್ಲಿ ಹಿರಿಯ ವಕೀಲರು ಕಿರಿಯ ವಕೀಲರಿಗೆ ಉತ್ತಮ ಪ್ರೊತ್ಸಾಹ ನೀಡುತ್ತಿರುವುದು ಶ್ಲಾಘನೀಯ. ವಕೀಲ ವೃತ್ತಿಯ ಸವಾಲು ಹಾಗೂ ಮಹತ್ವವನ್ನು ಅರಿತುಕೊಂಡು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವಂತೆ ಕಿವಿಮಾತು ಹೇಳಿದರು.
ವಿರಾಜಪೇಟೆ ವಕೀಲರ ಸಂಘ ಪ್ರಾರಂಭವಾಗಿ 60 ವಸಂತಗಳನ್ನು ಕಂಡ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದರೇಶ್ ವಕೀಲರ ಸಂಘ ಬೆಳೆದು ಬಂದ ದಾರಿ ಕುರಿತ ಪುಸ್ತಕ ಬಿಡುಗಡೆಗೊಳಿಸಿದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶುಕೂರೆ ಕಮಾಲ್ ಮಾತನಾಡಿದರು.
ರಾಜ್ಯ ಉಚ್ಚ ನ್ಯಾಯಾಲಯದ ಅಡ್ವೋಕೇಟ್ ಜನರಲ್ ದ್ಯಾನ್ ಚಿಣ್ಣಪ್ಪ, ಜಿಲ್ಲಾ ಅಪಾರ ನ್ಯಾಯಾಧೀಶೆ ಸುಜಾತಾ, ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ್ ಕೊಠಾರಿ, ಅಪರ ಸಿವಿಲ್ ನ್ಯಾಯಾಧೀಶ ಮಹಾಲಕ್ಷ್ಮೀ, ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಐ.ಆರ್.ಪ್ರಮೋದ್, ಉಪಾಧ್ಯಕ್ಷ ಸುಬ್ಬಯ್ಯ, ಕಾರ್ಯದರ್ಶಿ ದಿನೇಶ್ ಉಪಸ್ಥಿತರಿದ್ದರು. ಹಿರಿಯ ವಕೀಲರಾದ ಎಂ.ಕೆ ಪೂವಯ್ಯ, ಎಸ್.ಆರ್.ಜಗದೀಶ್, ಎನ್.ಜಿ.ಕಾಮತ್, ಬಿ.ಸಿ.ಸುಬ್ಬಯ್ಯ, ಶರತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಎಂ.ಪೂಣಚ್ಚ ಹಾಗೂ ಅವರ ಪತ್ನಿ ಸವಿತಾ ಪೂಣಚ್ಚ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನ್ಯಾಯಾಧಿಶರನ್ನು ಪ್ರವಾಸಿ ಮಂದಿರದಿಂದ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ನ್ಯಾಯಾಲಯ ಆವರಣಕ್ಕೆ ಕರೆ ತರಲಾಯಿತು.