ನ್ಯಾಯಾಂಗ ವಶಕ್ಕೆ ಐವರು ಆರೋಪಿಗಳು

Published on

ಮಳವಳ್ಳಿ: ಪಟ್ಟಣದ ಕೋಟೆಬೀದಿಯ ಬಾಡಿಗೆ ಮನೆಯೊಂದರಲ್ಲಿ ಮಾದಕ ವಸ್ತು ಸೇವನೆ, ಮಾರಕಾಸ್ತ್ರ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.


ಪಟ್ಟಣದ ನದೀಮ್, ಸುಲೇಮಾನ್, ರೋಷನ್, ಮಾಜ್ ಖುರೇಶಿ, ಸುದೀಪ್ ಬಂಧಿತರು. ಇವರಿಂದ ನಾಲ್ಕು ಲಾಂಗ್‌ಗಳು ವಶಪಡಿಸಿಕೊಳ್ಳಲಾಗಿದೆ. ತಸ್ಲೀಮ್ ಎಂಬ ಮಹಿಳೆ ಪವಿತ್ರರಾಜು ಎಂಬುವರ ಮನೆ ಬಾಡಿಗೆ ಪಡೆದು ವಾಸವಿದ್ದು, ಮನೆ ಖಾಲಿ ಮಾಡಿಕೊಡುವಂತೆ ಹಲವು ಬಾರಿ ತಿಳಿಸಿದ್ದರೂ ಸಬೂಬು ಹೇಳಿಕೊಂಡು ಕಾಲ ದೂಡುತ್ತಿದ್ದರು. ಇತ್ತೀಚೆಗೆ ಮಳೆಯಿಂದ ಮನೆಯ ಹಿಂಬದಿಯ ಗೋಡೆ ಕುಸಿದಿದ್ದರಿಂದ ಮಾಲೀಕ ಆ.28ರಂದು ಮನೆ ಪರಿಶೀಲನೆ ವೇಳೆ ಗಾಂಜಾ ಸೇವಿಸುತ್ತಿರುವುದು, ಮನೆಯೊಳಗೆ ಕಂದಕ ಕೊರೆದಿರುವುದು, ಜತೆಗೆ ನಾಲ್ಕು ಲಾಂಗುಗಳು ಪತ್ತೆಯಾಗಿದ್ದವು. ಅಂದು ಪೊಲೀಸರನ್ನು ಸ್ಥಳಕ್ಕೆ ಕರೆತರುವಷ್ಟರಲ್ಲಿ ಆರೋಪಿಗಳು ಬೈಕ್‌ನಲ್ಲಿ ಬಂದು ಮಾರಾಕಾಸ್ತ್ರಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಆ.29 ರಂದು ಪವಿತ್ರರಾಜು ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದರು.


ರದಿಗೆ ಎಚ್ಚೆತ್ತ ಇಲಾಖೆ:
ಈ ಸಂಬಂಧ ಪೊಲೀಸರು ದೂರು ದಾಖಲಿಸಲು ವಿಳಂಬ ಮಾಡುತ್ತಿದ್ದರು. ಈ ವಿಷಯವಾಗಿ ‘ವಿಜಯವಾಣಿ’ ಬಾಡಿಗೆ ಪಡೆದಿದ್ದ ಮನೆಯಲ್ಲಿ ‘ಮಾರಕಾಸ್ತ್ರ, ಸುರಂಗ ಪತ್ತೆ’ ಹಾಗೂ ‘ಮಾರಾಕಾಸ್ತ್ರ ದೂರು ಬದಲಾಯಿಸಿದ ಪೊಲೀಸರು’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವರದಿಯಲ್ಲಿನ ಅಂಶಗಳ ಬಗ್ಗೆ ಆತಂಕ ವ್ಯಕ್ತಪಡಿಸುವುದರ ಜತೆಗೆ ‘ವಿಜಯವಾಣಿ ವರದಿಗೆ’ ಮೆಚ್ಚುಗೆ ವ್ಯಕ್ತಪಡಿಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕೂಡಲೇ ಎಚ್ಚೆತ್ತ ಪೊಲೀಸರು ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಸೆ.4ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net