ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

Published on

ಬಳ್ಳಾರಿ : ಸಂಡೂರು ಕ್ಷೇತ್ರದ ಉಪ ಚುನಾವಣೆಯು ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.ನಗರದ ಡಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಡೂರು ಕ್ಷೇತ್ರಕ್ಕೆ ಮಾತ್ರ ತಕ್ಷಣದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದೆ. ನ. 13 ರಂದು ಮತದಾನ ಹಾಗೂ ನ. 23 ರಂದು ಮತ ಎಣಿಕೆ ನಡೆಯಲಿದೆ. ಅ. 18 ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಕೆಗೆ ಅ. 25 ರಂದು ಕೊನೆಯ ದಿನವಾಗಿದೆ. ಅ. 28ಕ್ಕೆ ನಾಮಪತ್ರಗಳ ಪರಿಶೀಲನೆ ಹಾಗೂ ಅ. 30 ರಂದು ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದೆ. ಕ್ಷೇತ್ರದಲ್ಲಿ 1,17,789 ಪುರುಷ, 1,18,282 ಮಹಿಳಾ ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಸೇರಿದ ಒಟ್ಟು 2,36,100 ಮತದಾರರಿದ್ದಾರೆ. ಒಟ್ಟಾರೆ 253 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಜಿಂದಾಲ್ , ವೇಣಿ ವೀರಾಪುರ (ಜಿಲ್ಲೆಯೊಳಗೆ ), ಮೊತಲಕುಂಟ, ವೆಂಕಟಗಿರಿ, ಶ್ರೀರಾಮು ಶೆಟ್ಟಿಹಳ್ಳಿ (ಅಂತರ ಜಿಲ್ಲಾ ) ಹಾಗೂ ಜಿ. ಬಸಾಪುರ, ಎಂ. ಗಂಗಲಾಪುರ ಗ್ರಾಮದ ಬಳಿ (ಅಂತರ ರಾಜ್ಯ) ಸೇರಿ ಒಟ್ಟಾರೆ ಎಂಟು ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಉಪ ಚುನಾವಣೆ ಹಿನ್ನಲೆ 20 ಸೆಕ್ಟರ್ ಅಧಿಕಾರಿಗಳು, 9 ಎಫ್‌ಎಸ್‌ಟಿ , 8 ಎಸ್‌ಎಸ್‌ಟಿ , 1 ವಿವಿಟಿ ,3 ವಿಎಸ್‌ಟಿ, 1 ಸಹಾಯಕ ಚುನಾವಣೆ ವೆಚ್ಚ ವೀಕ್ಷಕ, 1 ಅಕೌಂಟಿಂಗ್ ತಂಡಗಳನ್ನು ರಚಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 304 ಪಿಆರ್‌ಒ, 304 ಎಪಿಆರ್‌ಒ ಮತ್ತು 608 ಜನ ಪಿಓ ಸೇರಿ ಒಟ್ಟು 1215 ಸಿಬ್ಬಂದಿ ನೇಮಿಸಲಾಗಿದೆ. 505 ಬ್ಯಾಲೆಟ್, 503 ಕಂಟ್ರೋಲ್ ಯೂನಿಟ್ ಮತ್ತು 492 ವಿವಿಪ್ಯಾಟ್ ಗಳ ಮೊದಲ ಹಂತದ ಪರಿಶೀಲನೆ ನಡೆಸಲಾಗಿದೆ. 304 ಬ್ಯಾಲೆಟ್ ಯುನಿಟ್, 304 ಕಂಟ್ರೋಲ್ ಯುನಿಟ್ ಮತ್ತು 329 ವಿವಿಪ್ಯಾಟ್ ಮತಯಂತ್ರಗಳು ಅಗತ್ಯವಿದೆ ಎಂದರು. ಡಿಸಿ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಂ ಅನ್ನು ತೆರೆಯಲಾಗಿದ್ದು, ಸಾರ್ವಜನಿಕರು ದೂರು ನೀಡಬಹುದು. ಎಲ್ಲ ಸರ್ಕಾರದ ಯೋಜನೆಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಭಿತ್ತಿ ಪತ್ರಗಳನ್ನು, ಕಟೌಟ್ಸ್ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಮತದಾನ ಹೆಚ್ಚಿಸಲು ಜಿಪಂ, ತಾಪಂ ವತಿಯಿಂದ ಸ್ವೀಪ್ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು. ಪ್ರಮುಖರಾದ ಎಸ್ಪಿ ಡಾ. ವಿ. ಜೆ. ಶೋಭರಾಣಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಡಿಸಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಪ್ರಮೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net