

ಭಾಲ್ಕಿ: ಪಟ್ಟಣದ ನ್ಯಾಯವಾದಿ ಧನಲಕ್ಷ್ಮಿ ಬಳತೆ ಮತ್ತು ಅವರ ಪತಿ ರಾಜಕುಮಾರ ಬಳತೆ ಅವರನ್ನು ಬಂಧಿಸಿರುವುದನ್ನು ಖಂಡಿಸಿ, ನ್ಯಾಯವಾದಿಗಳ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿ, ಕೋರ್ಟ್ ಕಾರ್ಯಕಲಾಪಗಳಿಗೆ ಬಹಿಷ್ಕಾರ ಹಾಕಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ರಾತ್ರಿ ೧೨ಗಂಟೆಗೆ ಬಂಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಶುಕ್ರವಾರ ರಾತ್ರಿ ೧೨ಕ್ಕೆ ನ್ಯಾಯವಾದಿ ಧನಲಕ್ಷ್ಮೀ ಬಳತೆ ಮತ್ತು ಪತಿ ರಾಜಕುಮಾರ ಬಳತೆ ಅವರನ್ನು ಬಂಧಿಸಿದ್ದು ಖಂಡನೀಯ.
ಸಿವಿಲ್ ಕೋರ್ಟ್ನಲ್ಲಿ ಸ್ಥಳವೊಂದರ ಕುರಿತು ತಹಸೀಲ್ದಾರ್ ಮತ್ತು ಬಳತೆ ಮಧ್ಯೆ ಕಾನೂನು ಹೋರಾಟ ನಡೆಯುತ್ತಿದೆ. ಕಾನೂನು ಪ್ರಕಾರ ಆ ಸ್ಥಳಕ್ಕೆ ತಡೆಯಾಜ್ಞೆ ಇದೆ. ಅದನ್ನು ತೆರವುಗೊಳಿಸಿ, ಕಾನೂನು ಕ್ರಮ ಕೈಗೊಳ್ಳುವುದು ಬಿಟ್ಟು, ರಾಜಕೀಯ ಒತ್ತಡದಿಂದ ಬಂಧನ ಮಾಡಿರುವುದು ಅಕ್ಷಮ್ಯ ಅಪರಾಧ. ಕೂಡಲೇ ತಹಸೀಲ್ದಾರ್, ಬಸವಕಲ್ಯಾಣ ಸಹಾಯಕ ಆಯುಕ್ತ, ಭಾಲ್ಕಿ ಸಿಪಿಐ ಅವರನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಡಿವೈಎಸ್‌ಪಿಯವರು ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ರಸ್ತೆ ತಡೆ ನಿಲ್ಲಿಸಿದರು.
ನ್ಯಾಯವಾದಿಗಳಾದ ಉಮಾಕಾಂತ ವಾರದ, ಸುರೇಶ ಬಿರಾದಾರ, ಭುಸಗುಂಡೆ, ನೆಲವಾಡೆ, ಇಂದ್ರಸೇನ್ ಬಿರಾದಾರ, ರಾಹುಲ್ ಸಾವಳೆ, ಸತೀಶ ಲದ್ದೆ, ಶಂಭುಲಿAಗ, ವಿನೋದ ಬಿರಾದಾರ, ಶಿವಕುಮಾರ ಕೇರುರೆ, ದಯಾನಂದ ಪವಾರ, ನಾಗನಾಥ ಸ್ವಾಮಿ ಇತರರಿದ್ದರು.