

ಚಿಕ್ಕಮಗಳೂರು: ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳ ಮೇಲೆ ಮನುವಾದಿ ವಕೀಲರೋರ್ವರು ಶೂ ಎಸೆಯುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ಸರ್ವೋಚ್ಚ ನ್ಯಾಯಪೀಠಕ್ಕೆ ಆದ ಅವಮಾನ ಖಂಡನಾ ಹೋರಾಟ ವೇದಿಕೆ, ವಿವಿಧ ರಾಜಕೀಯ ಮುಖಂಡರು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರದ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ವಕೀಲ ರಾಕೇಶ್ ಕಿಶೋರ್ ಅವರ ಅಣುಕು ಶವವನ್ನು ಎಂ.ಜಿ.ರಸ್ತೆ ಮುಖಾಂತರ ಆಜಾದ್‌ಪಾರ್ಕ್ ವೃತ್ತದವರೆಗೆ ಹೊತ್ತು ಪ್ರತಿಭಟನಕಾರರು ಸಾಗಿದರು. ಜಾಥಾದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡು ಸಂವಿಧಾನಕ್ಕೆ ಅವಮಾನಿಸಿದ ವಕೀಲರ ವಿರುದ್ಧ ಧಿಕ್ಕಾರ ಕೂಗುತ್ತಾ ಆಜಾದ್‌ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು.
ಈ ವೇಳೆ ಮಾತನಾಡಿದ ಹೋರಾಟ ವೇದಿಕೆ ಮುಖಂಡ ಅನಿಲ್‌ಕುಮಾರ್, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಪಕ್ಷ ಹಾಗೂ ಧರ್ಮ ಬಿಟ್ಟು ಹೋರಾಡಬೇಕು. ದೇಶಕ್ಕೆ ಅತಿದೊಡ್ಡ ಕವಚ ಸಂವಿಧಾನ. ಇದಕ್ಕೆ ವಿರುದ್ಧವಾಗಿ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವ ವ್ಯಕ್ತಿಯನ್ನು ಬಂಧಿಸಿ ಗಲ್ಲುಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ರಾಜತಾಂತ್ರಿಕ ವ್ಯವಸ್ಥೆಯಲ್ಲಿ ರಾಜರೇ ಪ್ರಭುಗಳಾಗಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಜೆಗಳೇ ಪ್ರಭುಗಳು. ಅದಕ್ಕಾಗಿ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ನ್ಯಾಯಾಂಗ ವ್ಯವಸ್ಥೆ ನಿರ್ಮಿಸಿದರು. ಆದರೆ ಮನುವಾದಿ ವ್ಯಕ್ತಿತ್ವವುಳ್ಳ ವಕೀಲರು ಮುಖ್ಯ ನ್ಯಾಯಮೂರ್ತಿಗೆ ಅಪಮಾನಿಸಿ ರಾಷ್ಟçದ ಐಕ್ಯತೆಯಾದ ಸಂವಿಧಾನಕ್ಕೆ ಅಗೌರವಿಸಿದ್ದಾರೆ ಎಂದು ದೂರಿದರು.
ಇತ್ತೀಚಿನ ದಿನಗಳಲ್ಲಿ ಜೈಭೀಮ್ ಘೋಷಣೆಗಳು ಕೆಲವರಿಗೆ ನೋವುಂಟು ಮಾಡುತ್ತಿವೆ. ಈ ಪ್ರಕರಣ ಗಮನಿಸಿದರೆ ಇಂದಿಗೂ ಅಸ್ಪÊಶ್ಯತೆ, ಜಾತಿವ್ಯವಸ್ಥೆ ಕಣ್ಮುಂದಿರಲು ಈ ಘಟನೆಯೇ ಸಾಕ್ಷಿಯಾಗಿದೆ. ಹೀಗಾಗಿ ಈ ಘಟನೆ ಮರುಕಳಿಸದ ದೃಷ್ಟಿಯಿಂದ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕು. ಅಲ್ಲದೇ ವಕೀಲ ರಾಕೇಶ್ ಕಿಶೋರ್ ಪರವಾಗಿ ಸಮರ್ಥಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ವರಿಗೂ ಸಮಪಾಲು, ಸಮಬಾಳು ಹಾಗೂ ಮತದಾನದ ಹಕ್ಕನ್ನು ನೀಡಿದವರು ಅಂಬೇಡ್ಕರ್. ಅದೇ ಸಂವಿಧಾನವನ್ನು ಓದಿದ ವಕೀಲ ರಾಕೇಶ್ ನ್ಯಾಯಮೂರ್ತಿಗಳಿಗೆ ಅಪಮಾನಿಸಿರುವುದು ಸರಿಯಲ್ಲ. ಭಾರತಕ್ಕೆ ಸಂವಿಧಾನವೇ ಶ್ರೇಷ್ಟ. ಹಾಗಾಗಿ ಸಾರ್ವಜನಿಕರು ಈ ಕೃತ್ಯವೆಸಗಿರುವವರ ವಿರುದ್ಧ ಎಲ್ಲೆಡೆ ಕೇಸು ದಾಖಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ದೇಶದಲ್ಲಿ ಹಿಂದೆAದೂ ಜರುಗದಂಥ ಅಹಿತಕರ ಘಟನೆ ಇಂದು ನಡೆದಿದೆ. ಆರ್‌ಎಸ್‌ಎಸ್ ಸಂಸ್ಕೃತಿಯ ವಕೀಲರು ನ್ಯಾಯಮೂರ್ತಿಗೆ ಶೂ ಎಸೆದು ದೇಶದ ನಾಗರಿಕತೆಗೆ ಧಕ್ಕೆಯುಂಟು ಮಾಡಿದ್ದಾರೆ. ಇದರಿಂದ ಭಾರತೀಯರಿಗೆ ತುಂಬಲಾರದ ನೋವುಂಟಾಗಿದೆ. ಆದ್ದರಿಂದ ಅಪರಾಧವೆಸಗಿರುವ ವಕೀಲನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.
ಇತ್ತೀಚೆಗೆ ಆರ್‌ಎಸ್‌ಎಸ್ ಶತಬ್ಧಿ ಸಂಭ್ರಮದಲ್ಲಿ ದೇಶದ ವಿವಿಧೆಡೆ ಕವಾಯಿತು ನಡೆಸಿದ ಸ್ವಯಂ ಸೇವಕರು, ಒಮ್ಮೆಯಾದರೂ ಅಪಮಾನಕ್ಕೆ ಒಳಗಾದ ನ್ಯಾಯಮೂರ್ತಿಗಳ ಪರವಾಗಿ ನಿಲ್ಲದೇ ಮೌನ ವಹಿಸಿದ್ದಾರೆ. ದೆಹಲಿಯಲ್ಲಿ ರೈತರು ಧಾರುಣ ಸಾವಿಗೆ ತುತ್ತಾದರೂ ಬಿಜೆಪಿ ಅಥವಾ ಆರ್‌ಎಸ್‌ಎಸ್ ಆ ಬಗ್ಗೆ ಮಾತನಾಡಿಲ್ಲ. ಕೇವಲ ಕ್ಷುಲಕ ಕಾರಣಕ್ಕಾಗಿ ಅರ್ಥವಿಲ್ಲದೇ ಚಳವಳಿಯನ್ನು ಬೇಕಾದರೆ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು.
ಭಾರತ ಗೋಮಾಂಸ ರಫ್ತು ಮಾಡುವಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ನಿನ್ನೆ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರು ಬೀಫ್ ಬಿರಿಯಾನಿ ಪ್ರದರ್ಶನ ಮಾಡುತ್ತಾರೆ. ಆದರೆ ಬೀಫ್ ಬಿರಿಯಾನಿ ತಂದುಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು ತಮ್ಮ ಅವಧಿಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ, ಇದೀಗ ಸಿ.ಟಿ.ರವಿ ಅವರು ಗೋ ಮಾಂಸದ ವಿಷಯವನ್ನು ಇದೀಗ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ನ್ಯಾಯಮೂರ್ತಿಗೆ ಅವಮಾನಿಸಿರುವ ವಕೀಲನನ್ನು ರಾಷ್ಟçದ್ರೋಹದಡಿ ಗಲ್ಲಿಗೇರಿಸಬೇಕು. ಸಾವಿರಾರು ವರ್ಷಗಳಿಂದೆ ವರ್ಣನೀತಿ ಪದ್ಧತಿ ಜಾರಿಯಾಗಿ ದಲಿತರಿಗೆ ಅನ್ಯಾಯ, ದಬ್ಬಾಳಿಕೆಗಳು ಅವ್ಯಹತವಾಗಿ ನಡೆದಿದೆ. ಇಂದಿಗೂ ದೇಶದಲ್ಲಿ ಶೇ. ೮೫ರಷ್ಟು ಬಹುಸಂಖ್ಯಾತರು ಅಧಿಕಾರ ಹೀನವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.
ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿ, ಮುಖ್ಯ ನ್ಯಾಯಾಧೀಶರು ದಲಿತರೆಂಬ ಕಾರಣಕ್ಕಾಗಿ ಮನುವಾದಿ ವಕೀಲರು ಶೂ ಎಸೆದು ಅವಮಾನಿಸಲು ಮುಂದಾಗಿರುವುದು ಖಂಡನೀಯ. ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ವಕೀಲ ವೃತ್ತಿಗೆ ರಾಜಿನಾಮೆ ಸಲ್ಲಿಸಬೇಕು. ನ್ಯಾಯಮೂರ್ತಿಗೆ ಅಗೌರವಿಸುವ ವಕೀಲರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಜುಮ್ಮಾ ಮಸೀದಿಯ ನಾಸೀರ್ ಮಾತನಾಡಿ, ಸಂವಿಧಾನ ಮತ್ತು ನ್ಯಾಯಪೀಠಕ್ಕೆ ಅಪಮಾನಿಸಿರುವವರ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಅನುಕಂಪ ವ್ಯಕ್ತಪಡಿಸದೇ ಕಾನೂನಾತ್ಮಕವಾಗಿ ನ್ಯಾಯಬದ್ಧ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್, ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ನಗರಸಭೆ ಸದಸ್ಯ ಮುನೀರ್ ಅಹ್ಮದ್, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷö್ಮಣ್, ಮುಖಂಡರಾದ ಹಿರೇಮಗಳೂರು ಜಗದೀಶ್, ಸತೀಶ್, ಕೋಟೆ ಜಗದೀಶ್, ಮೋಹನ್, ಲಾಕೇಶ್, ಸುಮಂತ್, ರಮೇಶ್, ಸುಧೀರ್ ಮತ್ತಿತರರಿದ್ದರು.