ನ್ಯಾಯಮೂರ್ತಿ ಶಿವಶಂಕರೇಗೌಡ ವಿರುದ್ಧ ದೂರು: ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆ

Former MLA Annadani press conference Mandya
Published on

ಮಂಡ್ಯ: ಮಳವಳ್ಳಿ ತಾಲೂಕಿನ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಲು ಹರಕೆ ಹೊತ್ತಿಕೊಂಡಿರುವುದಾಗಿ ಹೇಳಿದ್ದಾರೆ. ಶಿವಶಂಕರೇಗೌಡ ಅವರು ನ್ಯಾಯಮೂರ್ತಿಗಳೋ ಅಥವಾ ರಾಜಕಾರಣಿಗಳ ಕೈಯಾಳೋ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನಿಸಿದರು.

ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ನ್ಯಾಯಾಧೀಶರು ಗೌಪ್ಯತೆ ಕಾಪಾಡುವ ಬದಲಿಗೆ ರಾಜಕಾರಣಿಯೋ, ರಾಜಕಾರಣಿಗಳ ಬೆಂಬಲಿಗರೇ ಎಂಬ ಅನುಮಾನ ಮೂಡುವಂತೆ ವರ್ತಿಸಿದ್ದಾರೆ. ವೇದಿಕೆಯೊಂದರಲ್ಲಿ ರಾಜಕಾರಣಿಗೆ ಸಚಿವ ಸ್ಥಾನ ಲಭಿಸಲಿ ಎಂದು ದೇವರಲ್ಲಿ ಹರಕೆ ಹೊತ್ತಿರುವುದಾಗಿ ಹೇಳಿದ್ದಾರೆ. ರಾಜಕಾರಣಿಗಳಿಗಿಂತ ಹೆಚ್ಚಾಗಿ ಭಾಷಣ ಮಾಡಿರುವ ವಿಡಿಯೋ ಸಮೇತ ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಲಾಗುವುದು. ಅಂತೆಯೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಈ ಸಂಬಂಧ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆಗಳು ಜನತೆಯನ್ನು ಕಷ್ಟಕ್ಕೆ ದೂಡಿದ್ದು, ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ನೀಡಲು ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಶಾಸಕರೇ ಆರೋಪಿಸಿದ್ದಾರೆ. ಇದರ ಬೆನ್ನಲೇ ಬಸ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿದ್ದು, ಇದನ್ನು ಜೆಡಿಎಸ್ ಖಂಡಿಸುತ್ತದೆ. ಸಹಜವಾಗಿ ಶೇ.2ರಿಂದ 3ರಷ್ಟು ಹೆಚ್ಚಳ ಮಾಡುವುದುಂಟು. ಬಡವರ ಕೂಲಿ ಹೆಚ್ಚಳ ಮಾಡದೇ ಬಸ್ ದರ ಶೇ.15 ರಷ್ಟು ಹೇರಿಕೆ ಮಾಡುವುದು ಸಮಂಜಸವಲ್ಲ ಎಂದರು.

ಕೆಆರ್‌ಎಸ್ ಜಲಾಶಯದಲ್ಲಿ ಇಂದಿಗೂ 124 ಅಡಿ ನೀರಿದೆ. ಆದ್ದರಿಂದ ಮಳವಳ್ಳಿ ತಾಲೂಕಿಗೆ ಕಟ್ಟುಪದ್ಧತಿಯಲ್ಲಿ ನೀರು ಬಿಟ್ಟು ನಿರಂತರವಾಗಿ ಹರಿಸಲು ಕ್ರಮವಹಿಸಬೇಕು. ಮಳವಳ್ಳಿಯ ಜನತೆ ಅರೆ ನೀರಿನಲ್ಲಿ ಬೆಳೆ ಬೆಳೆಯುವಂತಾಗಿದ್ದು, ತಾಲೂಕಿನ ಎರಡು ಹೋಬಳಿಗೆ ಕುಡಿಯಲೂ ನೀರಿರುವುದಿಲ್ಲ. ಮತ್ತೆರಡು ಹೋಬಳಿಗೆ ಅರ್ಧದಷ್ಟು ನೀರಿದೆ. ಹಲವು ಬಾರಿ ಕುಡಿಯಲು ಸಹ ನೀರು ಇಲ್ಲದಂತಾಗುತ್ತದೆ. ತಾಲೂಕಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹನುಮಂತು, ಕಾಂತರಾಜು, ಜಯರಾಂ, ಶ್ರೀಧರ್, ಸಿದ್ದಾಚಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net