ನ್ಯಾಯಬೆಲೆ ಅಂಗಡಿ ಮತ್ತು ಬಳಕೆದಾರರ ಸಹಕಾರ ಸಂಘದಿಂದ ಪ್ರತಿಭಟನೆ

15
Published on

ಮೈಸೂರು: ಯಾವುದೇ ಅಧಿಕಾರ ಇಲ್ಲದಿದ್ದರೂ ಸಂಘಟನೆ ಹೆಸರು ಹೇಳಿಕೊಂಡು ನ್ಯಾಯಬೆಲೆ ಅಂಗಡಿ ಪರಿಶೀಲನೆ ಮಾಡುವ ಮೂಲಕ ಮಾಲೀಕರಿಗೆ ದಿನನಿತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ನ್ಯಾಯಬೆಲೆ ಅಂಗಡಿ ಮತ್ತು ಬಳಕೆದಾರರ ಸಹಕಾರ ಸಂಘದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಧರಣಿ ನಡೆಸಿದ ಮುಖಂಡರು, ಮೈಸೂರು ನಗರ ಮತ್ತು ಜಿಲ್ಲಾ ಮಟ್ಟದಲ್ಲಿ ಒಟ್ಟು 1069 ನ್ಯಾಯಬೆಲೆ ಅಂಗಡಿಗಳಿದ್ದು, ಇತ್ತೀಚೆಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ದಿನನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ನುಗ್ಗಿ ಕಾರ್ಡ್‌ದಾರರಿಗೆ ಸರಿಯಾಗಿ ಪಡಿತರ ವಿತರಣೆ ಮಾಡಲು ಅವಕಾಶ ಕೊಡದೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಅಧಿಕಾರ ಇಲ್ಲದಿದ್ದರೂ ಲೆಕ್ಕಪತ್ರ ಕೇಳುವುದು, ದಾಸ್ತಾನು ಪರಿಶೀಲಿಸುವುದು ಇದನ್ನೆಲ್ಲಾ ಮೊಬೈಲ್‌ನಿಂದ ವಿಡಿಯೋ ಚಿತ್ರೀಕರಿಸುವುದು, ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಪಡಿತರದಾರರಿಗೆ ಪಡಿತರ ವಿತರಿಸುವ ಸಮಯದಲ್ಲಿ ದುಂಡಾವರ್ತನೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೂರುಗಳಿದ್ದರೆ ಮೇಲಿನ ಅಧಿಕಾರಿ ಇಲ್ಲದೇ ಜಿಲ್ಲಾಧಿಕಾರಿಗೆ ಕಾನೂನುಬದ್ಧವಾಗಿ ದೂರು ನೀಡಬೇಕು. ಇನ್ನು ಮುಂದೆ ನ್ಯಾಯಬೆಲೆ ಅಂಗಡಿ ಮುಂದೆ ದುಂಡಾವರ್ತನೆ ಅವಕಾಶ ನೀಡಬಾರದು, ಮಾಲೀಕರಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ದೇಶಿಗೌಡ, ಉಪಾಧ್ಯಕ್ಷ ವೈ.ಎನ್. ನಾಗೇಂದ್ರಗೌಡ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net