ನ್ಯಾಯಬೆಲೆ ಅಂಗಡಿ ಬಾಗಿಲಲ್ಲಿ ಪಡಿತರಕ್ಕೆ ಕಾದು ಬಸವಳಿದ ಜನತೆ

24bnk1 web
Published on

ಬಣಕಲ್: ಸುಂಕಸಾಲೆ ಸಮೀಪದ ಅಬ್ರುಗುಡಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರು ಪರದಾಡುವಂತಾಗಿದೆ. ಕೆಲ ದಿನಗಳಿಂದ ಸರ್ವರ್ ಕೈಕೊಡುತ್ತಿರುವುದರಿಂದ ಪಡಿತರದಾರರು ನ್ಯಾಯಬೆಲೆ ಅಂಗಡಿಯಲ್ಲಿ ಸಂಜೆಯವರೆಗೂ ಕಾದು ಹಿಂದಿರುಗುವಂತಾಗಿದೆ. ಈ ಭಾಗದಲ್ಲಿ ಬಹುತೇಕರು ಕೂಲಿಕಾರ್ವಿುಕರು. ಕೆಲಸಕ್ಕೆ ರಜೆ ಮಾಡಿ ನ್ಯಾಯಬೆಲೆ ಅಂಗಡಿಗೆ ಬಂದರೂ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಸಾಧ್ಯವಾಗದಂತಾಗಿದೆ. ಹಳ್ಳಿಗಾಡು ಪ್ರದೇಶದಿಂದ ಬರುವ ಮಹಿಳೆಯರು, ವೃದ್ಧರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿ ಬಾಗಿಲು ಕಾದು ಬರಿಗೈಲಿ ಹಿಂದಿರುಗುತ್ತಿದ್ದಾರೆ. ಇತ್ತ ಪಡಿತರವೂ ಇಲ್ಲ, ಅತ್ತ 2 ದಿನದ ಕೂಲಿ ಸಂಬಳವೂ ಇಲ್ಲ ಎಂಬ ಇಕ್ಕಟ್ಟಿನ ಸ್ಥಿತಿ ಬಡವರದ್ದು.

ಅರಮನೆ ತಲಗೂರು ಗ್ರಾಮದ ವೃದ್ಧೆ ಸುಂದರಮ್ಮ ಎರಡು ದಿನದಿಂದ ಸುಮಾರು 15 ಕಿಮೀ ದೂರದಿಂದ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬಂದಿದ್ದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಕಾದು ಸುಸ್ತಾಗಿದ್ದೇ ಬಂತು. ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಸಾಧ್ಯವಾಗಲಿಲ್ಲ. ಕೆಲ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬಂದು ಕಾದು ಬಸವಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net