

ಬಸವಕಲ್ಯಾಣ: ಅನ್ಯಾಯದ ವಿರುದ್ಧ ನ್ಯಾಯಕ್ಕೆ ಸಿಕ್ಕ ಜಯವೇ ಭೀಮಾ ಕೋರೆಗಾಂವ ವಿಜಯ. ಶೋಷಿತರು ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಶೋಷಣೆ ಮಾಡಿದವರ ವಿರುದ್ಧ ವೀರತನದಿಂದ ಹೋರಾಡಿ ಜಯ ಸಾಧಿಸಿದ ಭೀಮಾ ಕೋರೆಗಾಂವ ಯುದ್ಧ ಐತಿಹಾಸಿಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ಲೇಷಿಸಿದರು.
ಭಾರತೀಯ ದಲಿತ ಪ್ಯಾಂಥರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅರ್ಬನ್ ಯುಥ್ ಕ್ಲಬ್ ವತಿಯಿಂದ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಐತಿಹಾಸಿಕ ಭೀಮಾ ಕೋರೆಗಾಂವ ವಿಜಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂದು ೨೮ ಸಾವಿರ ಪೇಶ್ವೆ ಸೈನಿಕರ ವಿರುದ್ಧ ೫೦೦ ಮಹಾರ್ ಸೈನಿಕರು ವೀರತನದಿಂದ, ಶೌರ್ಯದಿಂದ ಹೋರಾಡಿ ಯುದ್ಧದಲ್ಲಿ ಗೆಲುವು ಸಾಧಿಸಿದ್ದು ಐತಿಹಾಸಕ ಎಂದು ಹೇಳಿದರು.
ಇಂದು ಶೋಷಿತರು ಸುಶಿಕ್ಷಿರಾಗಿ ದೊಡ್ಡ-ದೊಡ್ಡ ಹುದ್ದೆಯಲ್ಲಿ ಇದ್ದಾರೆ. ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದರ ಶ್ರೇಯಸ್ಸು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ದೇಶದ ರಕ್ಷಣೆ ಮಾಡಬೇಕಾದರೆ ಸಂವಿಧಾನದ ಸಂರಕ್ಷಣೆ ಮಾಡಬೇಕಿದೆ. ಇದಕ್ಕೆ ಒಗ್ಗಟ್ಟು, ಏಕತೆ ಅವಶ್ಯಕ ಎಂದರು.
ನ್ಯಾಯವಾದಿ ಚಿಂತಕ ತಾತ್ಯಾರಾವ ಕಾಂಬಳೆ ವಿಶೇಷ ಉಪನ್ಯಾಸ ನೀಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಆದೇಶ, ಸಂದೇಶ, ಮಂತ್ರ ಪಾಲಿಸಬೇಕು. ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು. ಜಾಗೃತರಾಗಿ ಸಂಘಟಿತರಾಗಬೇಕು ಎಂದರು.
ಮಾಜಿ ಎಂಎಲ್ಸಿ ವಿಜಯಸಿಂಗ್ ಮಾತನಾಡಿ, ಡಾ.ಅಂಬೇಡ್ಕರ್ ಅವರು ದೇಶದ ೧೪೦ ಕೋಟಿ ಜನರ ನಾಯಕರು. ಸಂವಿಧಾನದ ಮೂಲಕ ಸಂರಕ್ಷಣೆ ನೀಡಿದ್ದಾರೆ. ಪ್ರತಿ ಕ್ಷಣವೂ ಅವರನ್ನು ನೆನಪಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟಕದ ಅಧ್ಯಕ್ಷ ರವಿ ಗಾಯಕವಾಡ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಉದ್ಯಮಿ, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ,, ದಲಿತ ಪ್ಯಾಂಥರ್ ರಾಜ್ಯಧ್ಯಕ್ಷ ಮಲ್ಲಪ್ಪ ಹೊಸಮನಿ, ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ ಮಾತನಾಡಿದರು.
ಪೂಜ್ಯ ಭಂತೆ ಸಂಘಾನಂದ, ಹಾಲಹಳ್ಳಿಯ ಪೂಜ್ಯ ಭಂತೆ ಧಮ್ಮದೀಪ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷ ಎಂಡಿ ಸಗೀರೋದ್ದಿನ್, ಬಸವರಾಜ ಮಾಳಗೆ, ಮಗ್ದೂಮ ನಿಲಂಗೆ, ನರಸಿಂಗರಾವ ಕಾಂಬಳೆ, ಬಾಬುಹೊನ್ನಾ ನಾಯಕ, ನೀಲಕಂಠ ರಾಠೋಡ, ಅರ್ಜುನ ಕನಕ, ಶಶಿಕಾಂತ ದುರ್ಗೆ, ನಾಗನಾಥ ಗಜರೆ, ಪ್ರಲ್ಹಾದರಾವ ಮೋರೆ, ಪೌರಾಯುಕ್ತ ರಾಜು ಬಣಕಾರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ಸಿಡಿಪಿಒ ಗೌತಮ ಶಿಂಧೆ, ಬಿಸಿಎಂ ಅಧಿಕಾರಿ ಹಿರೇಗೌಡರ, ಡಿಕೆ ದಾವುದ್, ಹೈದರಾಬಾದ್‌ನ ಕೆ.ಕೆ ರಾಜಾ, ಪ್ಯಾಂಥರ್ ನಗರ ಘಟಕದ ಅಧ್ಯಕ್ಷ ವಿನೋದ ಸಿಂಧೆ, ಶಿವಾಜಿ ಸಿಂಧೆ ಇತರರಿದ್ದರು.
ಪ್ಯಾಂಥರ್ ನಗರ ಘಟಕದ ಕಾರ್ಯದರ್ಶಿ ಮಹೇಂದ್ರ ಮಂದಿರಕರ ಸ್ವಾಗತಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಪ್ರಭುಲ್ ಗಾಯಕವಾಡ, ರಾಹುಲ್ ತೂತಾರೆ, ಸಿದ್ಧಾರ್ಥ ಕಾಂಬಳೆ, ಶಿವಕುಮಾರ ಸಿತಾರ ಭೀಮ ಗೀತೆ ಹಾಡಿದರು. ಮಹಾರಾಷ್ಟ್ರದ ಖ್ಯಾತ ಗಾಯಕರಾದ ಸಾಹೇಬರಾವ ಏರೇಕರ್ ಅವರಿಂದ ತಡ ರಾತ್ರಿಯವರೆಗೂ ಭೀಮಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಬಸವಕಲ್ಯಾಣ ಜಿಲ್ಲೆಯಾಗಲಿ: ಬರುವ ಎರಡು ವರ್ಷದದಲ್ಲಿ ಬಸವಕಲ್ಯಾಣ ಜಿಲ್ಲಾ ಕೇಂದ್ರವಾಗಬೇಕು. ಈ ಕುರಿತು ವಿಧಾನಸಭೆ ಅಧಿವೇಶನಲ್ಲಿ ಪ್ರಸ್ತಾಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ನ್ಯಾಯವಾದಿ ಚಿಂತಕ ತಾತ್ಯಾರಾವ ಕಾಂಬಳೆ ಒತ್ತಾಯಿಸಿದರು. ಬಸವಕಲ್ಯಾಣ ಜಿಲ್ಲೆ ಮಾಡುಬೇಕು ಎನ್ನುವ ಆಸೆ ನಮಗೂ ಇದ್ದು, ಇದಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.