

ಚಾಮರಾಜನಗರ: ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ದೊರಕಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮ್ಮದ್ ಹೇಳಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆ ಮುಂಭಾಗದಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ಥರು, ಎಸ್‌ಡಿಪಿಐ ಹಾಗೂ ಪ್ರಗತಿಪರ ಸಂಘಟನೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಆಕ್ಸಿಜನ್ ದುರಂತ ಸಂಭವಿಸಿ ಮೇ.2 ಕ್ಕೆ ನಾಲ್ಕೂ ವರ್ಷಗಳು ತುಂಬುತ್ತಿದ್ದು, ಈ ನಿಟ್ಟಿನಲ್ಲಿ ಮೊಂಬತ್ತಿ ಬೆಳಗಿಸಿ ಕರಾಳ ದಿನವನ್ನು ಆಚರಿಸುತ್ತಿದ್ದೇವೆ. ನಮ್ಮ ಪಕ್ಷವು ಮೇ.03 ರಿಂದಲೂ ಈವರೆಗೂ ಸಂತ್ರಸ್ಥರ ಹೋರಾಟದ ಜತೆ ಇದ್ದು, ಸಂತ್ರಸ್ಥರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ದೊರಕಿಸಿಕೊಡುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದೇ ನಮ್ಮ ಉದ್ದೇಶವಾಗಿದೆ. ಒಂದುವೇಳೆ ಸಂತ್ರಸ್ಥರಿಗೆ ಉದ್ಯೋಗ ಕೊಡದಿದ್ದರೇ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಸಂತ್ರಸ್ಥರ ಜತೆಗೂಡಿ ಅಮರಣಾಂತ ಉಪವಾಸ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ಮೇ.02 ಚಾಮರಾಜನಗರಕ್ಕೆ ಮಾತ್ರ ಕರಾಳ ದಿನವಲ್ಲ, ಸ್ವತಂತ್ರ ಭಾರತದಲ್ಲಿ ಇಡೀ ದೇಶಕ್ಕೆ ಕರಾಳ ದಿನ. ಕೊರೋನಾ ಸಂದರ್ಭದಲ್ಲಿ ಕನಿಷ್ಠ ಆಮ್ಲಜನಕವನ್ನು ಪೂರೈಸಲಾಗದೇ ಅನೇಕ ಜನರು ಮರಣ ಹೊಂದಿರುತ್ತಾರೆ. ಇದು ದೇಶದ ದೊಡ್ಡ ದುರಂತವಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಸಂತ್ರಸ್ಥರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ದುರಂತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದರು.
ಈ ವೇಳೆ ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಪಿ.ಸಂಘಸೇನ, ಸಾಹಿತಿ ಸಿ.ಶಂಕರ ಅಂಕನಶೆಟ್ಟಿಪುರ, ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾ, ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಮಹೇಶ್ ಗಾಳಿಪುರ, ಮಹಮ್ಮದ್ ಅಮೀಕ್, ಇಸ್ರಾರ್, ಸಂತ್ರಸ್ಥರಾದ ನಾಗರತ್ನ, ಸವಿತ, ರಮೇಶ್ ಬಾಬು, ಅರುಣ್, ಮನು, ನೇತ್ರ, ಸೌಮ್ಯ, ರಾಜಶೇಖರ್ ಇತರರು ಭಾಗವಹಿಸಿದ್ದರು.