

ದೇವದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್ಸಿ ಸಿ.ಟಿ.ರವಿ ನೀಡಿದ ಹೇಳಿಕೆ ಖಂಡಿಸಿ ಪಟ್ಟಣದ ಮಿನಿವಿಧಾನಸೌಧದ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ದೇಶಕ್ಕೆ ಅಮೂಲ್ಯವಾದ ಸಂವಿಧಾನವನ್ನು ನೀಡಿದ್ದು, ಈ ಮೂಲಕ ಶೋಷಿತರಿಗೆ ನ್ಯಾಯ ಒದಗಿಸಿದ್ದಾರೆ. ಅಂಥವರ ಬಗ್ಗೆ ಅಮಿತ್ ಷಾ ಹಗುರವಾರ ಮಾತನಾಡಿದ್ದು ಖಂಡನೀಯ. ಅಂಬೇಡ್ಕರ್ ಹೆಸರು ಜಪಿಸುವ ಬದಲು ದೇವರ ನಾಮ ಸ್ಮರಿಸಿದ್ದರೆ ಸ್ವರ್ಗ ಸಿಗುತ್ತದೆ ಎಂದು ಹೇಳಿದ್ದು ಖಂಡನೀಯ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್ಸಿ ಸಿ.ಟಿ.ರವಿ ಅಶ್ಲೀಲ ಪದ ಬಳಸಿದ್ದು, ಮಹಿಳೆಯರಿಗೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕೇಂದ್ರ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು. ದೇಶದ ಜನರ ಕ್ಷಮೆ ಕೇಳಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ ಸಿ.ಟಿ.ರವಿ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಬೇಕು. ಎಂಎಲ್ಸಿ ಸದಸ್ಯತ್ವ ರದ್ದುಮಾಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.