

ಕಲಬುರಗಿ: ಭವಿಷ್ಯದಲ್ಲಿ ನ್ಯಾನೋ ತಂತ್ರಜ್ಞಾನ ಆಧಾರಿತ ಚಿಕಿತ್ಸೆ, ಶಸ್ತç ಚಿಕಿತ್ಸೆಯೇ ಬರಲಿದೆ. ಬೆಂಗಳೂರಿನಲ್ಲಿ ಈಗಾಗಲೇ ೩೮ ರೋಬೋಗಳು ಶಸ್ತç ಚಿಕಿತ್ಸೆ ಮಾಡುತ್ತಿದ್ದು, ಶಸ್ತçಚಿಕಿತ್ಸೆಗೆ ಸಾವಿರ ರೋಗಿಗಳು ಸರತಿಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ನಾವು ಹೊಸ ವಿಧಾನಗಳನ್ನು ಅರಿಯಬೇಕು ಎಂದು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆ ಹೃದಯ ರೋಗ ತಜ್ಞ ಡಾ.ವಿವೇಕ ಜವಳಿ ಹೇಳಿದರು.
ನಗರದ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್) ಶುಕ್ರವಾರ ಏರ್ಪಡಿಸಿದ್ದ ೨೦೧೮ನೇ ಎಂಬಿಬಿಎಸ್ ವಿದ್ಯಾರ್ಥಿಗಳ `ಉತ್ಕೃಷ್ಟ' ಆರೋಹಣ ಘಟಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಮಾತನಾಡಿ, ಭವಿಷ್ಯದಲ್ಲಿ ರೋಬೋಗಳ ಸಂಖ್ಯೆ ಹೆಚ್ಚಾಗಲಿದೆ. ವೈದ್ಯಕೀಯ ನ್ಯಾನೋ ಟೆಕ್ನಾಲಜಿ ಚಿಕಿತ್ಸೆಗೆ ಬೆಂಗಳೂರು ಹಬ್ ಆಗಲಿದೆ ಎಂದು ಹೇಳಿದರು.
ಹೈದರಾಬಾದ್‌ನ ಉಸ್ಮಾನಿಯ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಹ್ಮದ್ ಅಬ್ಬಾಸ್ ಅಲಿ ಮಾತನಾಡಿ, ಸಮಾಜವೂ ವೈದ್ಯರಿಂದ ಅತ್ಯುತ್ತಮ ತಪಾಸಣೆಯನ್ನು ಮಾತ್ರ ನಿರೀಕ್ಷೆ ಮಾಡುತ್ತದೆ. ರೋಗಿ ಗುಣಮುಖವಾದರೆ ನಿಮಗೆ ಗೌರವದ ಜತೆಗೆ ಸದಾ ಸ್ಮರಿಸುತ್ತಾರೆ. ನೂತನವಾಗಿ ಹೊರ ಬರುವ ವೈದ್ಯಕೀಯ ವಿದ್ಯಾರ್ಥಿಗಳು ಉದ್ಯೋಗ ಭೀತಿ, ಆರ್ಥಿಕತೆಯ ಲೆಕ್ಕಾಚಾರ ಹಾಕುತ್ತಾರೆ. ವೈದ್ಯರಿಗೆ ಉದ್ಯೋಗದ ಭೀತಿ ಬೇಡ. ಹಣದ ಚಿಂತೆ ಮಾಡಬೇಡಿ. ಜೀವನ ಕೌಶಲ ಅರಿತು, ಉದ್ಯೋಗದಾತರಾಗಲು ಪ್ರಯತ್ನಿಸಿ. ಹಣದ ನಿರ್ವಹಣೆಯನ್ನು ಅರಿತು ಜೀವನ ಸಾಗಿಸಿ ಎಂದು ಸಲಹೆ ನೀಡಿದರು.
ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್. ಮಾತನಾಡಿ, ಹೊಸ ಜೀವನದ ಅಧ್ಯಾಯ ಆರಂಭವಾಗುತ್ತಿದೆ. ಗುಣಮಟ್ಟದ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದು ಸಾಧಕರಾಗಿ ಹೊರಹೊಮ್ಮಬೇಕು. ಜಿಮ್ಸ್ ಸಂಸ್ಥೆಯಲ್ಲಿ ಎಲ್ಲ ಸೌಲಭ್ಯಗಳು ಘಟಕಗಳು ಇದ್ದು, ಅತ್ಯುತ್ತಮ ಚಿಕಿತ್ಸೆ ಜತೆಗೆ ಗುಣಮಟ್ಟದ ಶಿಕ್ಷಣವೂ ನೀಡಲಾಗುತ್ತಿದೆ. ಶೀಘ್ರದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯೂ ಶುರುವಾಗಲಿದೆ ಎಂದು ಹೇಳಿದರು.
ವೈದ್ಯಕೀಯ ಅಧೀಕ್ಷಕ ಶಿವಕುಮಾರ ಸಿ.ಎಸ್., ಡಾ.ಅಜಯಕುಮಾರ, ಭಾರತಿ, ಅರುಣಕುಮಾರ ಕುಲ್ಕರ್ಣಿ ಇತರರಿದ್ದರು.