

ಹಾಸನ: ತಾಲೂಕಿನ ದುದ್ದ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಹಾಸನ ಕೃಷಿ ಮಹಾವಿದ್ಯಾಲಯ ಅಂತಿಮ ವರ್ಷದ ಬಿ. ಟೆಕ್ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ನ್ಯಾನೋ ಗೊಬ್ಬರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು.
ನ್ಯಾನೋ ಗೋಬ್ಬರಗಳಾದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಇವುಗಳು ಇತ್ತೀಚಿಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಐಎಫ್‌ಎಫ್‌ಸಿಒ ಸಂಸ್ಥೆಯಿಂದ ಉತ್ಪಾದನೆಯಾಗುತ್ತಿದ್ದು, ರಾಸಾಯನಿಕ ಗೊಬ್ಬರದ ಪ್ರತಿಯಾಗಿ ಈ ಗೊಬ್ಬರ ಬಳಸಬಹುದು. ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ಆಹಾರ, ರೈತರ ಆದಾಯದಲ್ಲಿ ಹೆಚ್ಚಳ, ಪರಿಸರ ಸ್ನೇಹಿ ಗೊಬ್ಬರ ಇದಾಗಿದೆ ಎಂದು ವಿದ್ಯಾರ್ಥಿಗಳಿಗೆ ರೈತರಿಗೆ ಮಾಹಿತಿ ನೀಡಿದರು.
ನ್ಯಾನೋ ಯೂರಿಯಾ ಅಥವಾ ನ್ಯಾನೋ ಡಿಎಪಿ ಎಲ್ಲ ರೀತಿಯ ಬೆಳೆಗಳಿಗೆ ಅನ್ವಯವಾಗಲಿದೆ. 2-4 ಮಿ.ಲೀ ಅನ್ನು ಪ್ರತಿ 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಇದನ್ನು ಎರಡು ಬಾರಿ ಬೆಳವಣಿಗೆಯ ಹಂತದಲ್ಲಿ ಎಲೆಗಳ ಮೇಲೆ ಸಿಂಪಡಿಸಲಾಗುತ್ತದೆ. ನ್ಯಾನೋ ಡಿಎಪಿ ದ್ರವವನ್ನು ಬೀಜ ಅಥವಾ ಬೇರು ಸಂಸ್ಕರಣೆಗಾಗಿ ಹಾಗೂ ಬೆಳೆದ ನಂತರ ನಿರ್ಣಾಯಕ ಬೆಳವಣಿಗೆಯ ಹಂತಗಳಲ್ಲಿ ಒಂದರಿಂದ ಎರಡು ಎಲೆಗಳ ಮೇಲೆ ಸಿಂಪಡಿಸುವುದರಿಂದ ಬೆಳೆಗಳಿಗೆ ಸಾಂಪ್ರದಾಯಿಕ ಯೂರಿಯಾ ಮತ್ತು ಡಿಎಪಿಯ ಬಳಕೆಯನ್ನು ಶೇ.50 ರಷ್ಟು ಕಡಿಮೆಗೊಳಿಸಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಭರತ್ ಪ್ರಸಾದ್ ರವರು ಆಗಮಿಸಿ ರೈತರಿಗಿದ್ದ ಅನುಮಾನಗಳನ್ನು ಬಗೆಹರಿಸಿದರು.