

ಚಾಮರಾಜನಗರ: ರಾಜ್ಯ ಸರ್ಕಾರಕ್ಕೆ ನ್ಯಾ.ನಾಗಮೋಹನ್ ದಾಸ್ ಸಮಿತಿ ನೀಡಿರುವ ಒಳಮೀಸಲಾತಿ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ನ್ಯಾ.ನಾಗಮೋಹನ್ ದಾಸ್ ಅವರ ಭಾವಚಿತ್ರವನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಮತ್ತು ನಾಗಮೋಹನ್ ದಾಸ್ ವಿರುದ್ಧ ೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ಪರಿಶಿಷ್ಟ ಜಾತಿ ಜನಗಣತಿಗಾಗಿ ನ್ಯಾ.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚನೆ ಮಾಡಿತ್ತು. ಆದರೆ ಪರಿಶಿಷ್ಟ ಜಾತಿಗಳ ಜನಗಣತಿಯನ್ನು ಸಮರ್ಪಕವಾಗಿ ನಡೆಸದೇ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸಲ್ಲಿಸಿರುವ ಒಳಮೀಸಲಾತಿ ವರದಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಬರೆದಿರುವ ಮರಣ ಶಾಸನವಾಗಿದೆ ಎಂದು ಆರೋಪಿಸಿದರು.
ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಬಲಗೈ ಸಮುದಾಯಕ್ಕೆ ಸಂಪೂರ್ಣ ದ್ರೋಹವನ್ನು ಎಸಗಲಾಗಿದೆ. ಬಲಗೈ ಸಮುದಾಯದ ಹಲವಾರು ಉಪಜಾತಿಗಳನ್ನು ಎಡಗೈ ಸಮುದಾಯಕ್ಕೆ ಸೇರಿಸುವ ಮೂಲಕ ಬಲಗೈ ಸಮುದಾಯಕ್ಕೆ ವಂಚನೆ ಮಾಡಲಾಗಿದೆ. ಆಗಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ವರದಿಯನ್ನು ಸ್ವೀಕರಿಸದೆ ಸಂಪೂರ್ಣವಾಗಿ ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಈ ವರದಿಯನ್ನು ಉದ್ದೇಶಪೂರ್ವಕವಾಗಿ ನಡೆಸಿದ್ದು, ಬಲಗೈ ಸಂಬಂಧಿತ ಜಾತಿಗಳಿಗೆ ಮೋಸ ಮಾಡಲಾಗಿದೆ. ಈ ನಿಟ್ಟಿನಲ್ಲಿ ಒಳಮೀಸಲಾತಿ ವರದಿಯನ್ನು ಸ್ವೀಕಾರ ಮಾಡುವ ಮುನ್ನಾ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನವನ್ನು ಕರೆದು, ವರದಿಯ ಕುರಿತು ಸಮರ್ಪಕ ಚರ್ಚೆಯಾಗಬೇಕು. ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ನಾಗಯ್ಯ, ನಗರಸಭೆ ಮಾಜಿ ಸದಸ್ಯ ಮಹದೇವಯ್ಯ, ವಕೀಲ ದಲಿತ್‌ರಾಜ್, ಶಿವಣ್ಣ ಹೊಸೂರು, ಆಟೋ ಉಮೇಶ್, ಮಹದೇವಸ್ವಾಮಿ ಇನ್ನಿತರರು ಭಾಗವಹಿಸಿದ್ದರು.
ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ ದಾಸ್ ಸಮಿತಿಯ ಒಳಮೀಸಲಾತಿ ವರದಿಯನ್ನು ಜಾರಿಗೊಳಿಸದರೇ ಬಲಗೈ ಸಮುದಾಯದವರು ಕುಟುಂಬ ಸಮೇತರಾಗಿ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನು ರೂಪಿಸುತ್ತೇವೆ.
-ಸಿ.ಎಂ.ಶಿವಣ್ಣ, ದಸಂಸ ಸಂಚಾಲಕ, ಚಾಮರಾಜನಗರ