ನೌಬಾದ್ ನಲ್ಲಿ ಮಾತೇಶ್ವರಿ ಗೋ ಶಾಲೆ

Gooshale pooja
Published on

ಬೀದರ್: ನೌಬಾದ್ ಹತ್ತಿರದ ಭಾಲ್ಕಿ ರಸ್ತೆಯಲ್ಲಿ ಇರುವ ಜ್ಞಾನ ಶಿವಯೋಗಾಶ್ರಮ ಪರಿಸರದಲ್ಲಿ ಶ್ರೀ ವೈಷ್ಣೋದೇವಿ ಕಲ್ಚರಲ್, ಚಾರಿಟೇಬಲ್ ಟ್ರಸ್ಟ್ ನಿಂದ ನೂತನ ಗೋ ಶಾಲೆ ಭೂಮಿಪೂಜೆ ಶುಕ್ರವಾರ ಜರುಗಿತು.

ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿ ಮಹಾತಪಸ್ವಿ ಪೂಜ್ಯ ಕರುಣಾದೇವಿ ಮಾತಾ ಅವರು ಗೋಶಾಲೆ ಭೂಮಿ ಪೂಜೆ ನೆರವೇರಿಸಿ, ನೂತನ ಗೋ ಶಾಲೆಗೆ ಮಾತೇಶ್ವರಿ ಗೋಶಾಲೆ ಎಂದು ನಾಮಕರಣ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಜ್ಞಾನ ಶಿವಯೋಗಾಶ್ರಮದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗೋವನ್ನು ತಾಯಿ ಸ್ವರೂಪದಲ್ಲಿ ಕಾಣುತ್ತೇವೆ. ಪ್ರತಿಯೊಬ್ಬರೂ ಗೋವುಗಳ ಸಂರಕ್ಷಣೆಗೆ ಶ್ರಮಿಸಬೇಕು. ಗೋ ಶಾಲೆ ಮಾಡುವ ಸಂಕಲ್ಪ ಉತ್ತಮವಾಗಿದ್ದು, ಇದು ಜಿಲ್ಲೆಯಲ್ಲಿ ಮಾದರಿಯಾಗಿ ಅಭಿವೃದ್ಧಿ ಹೊಂದಲಿ ಎಂದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಮಲ್ಲಿಕಾರ್ಜುನ ಹಂಚನಾಳ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಗೋವುಗಳ ಸಂಖ್ಯೆ ತೀರ ಕಡಿಮೆಯಾಗುತ್ತಿದ್ದರಿಂದ ಸಂರಕ್ಷಣೆ ಮಾಡುವುದು ತುಂಬ ಅಗತ್ಯವಾಗಿದೆ. ಸರ್ಕಾರವು ಪ್ರತಿ ತಾಲೂಕಿಗೆ ಎರಡರಂತೆ ಗೋಶಾಲೆ ತೆರೆಯಲು ಅವಕಾಶ ಕಲ್ಪಿಸಿದ್ದು, ನೂತನ ಗೋ ಶಾಲೆಗಳಿಗೆ ಇಲಾಖೆಯಿಂದ ಬರುವ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಮಾತನಾಡಿ, ಬಹಳ ದಿನಗಳ ಸಂಕಲ್ಪದಿಂದಾಗಿ ಗೋಶಾಲೆಯ ಭೂಮಿ ಪೂಜೆ ಮಾಡಲಾಗಿದೆ. ದೇಶಿ ಗೋ ತಳಿಗಳನ್ನು ಸಂರಕ್ಷಿಸಲು ಗೋಶಾಲೆ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯಾ ಸ್ವಾಮಿ ಮಾತನಾಡಿದರು. ಪಶುವೈದ್ಯ ಇಲಾಖೆ ಅಧಿಕಾರಿ ಡಾ.ರವೀಂದ್ರ ಭೂರೆ, ಪ್ರದೀಪ ರಾಗಾ, ಉಮಾಕಾಂತ ಜೇಮಶೆಟ್ಟೆ, ದತ್ತು ಬಾವಗೆ, ಶಿವರಾಜ ಕೋಟೆ, ಉಮೇಶ ಸಿದ್ದೇಶ್ವರ, ಶಿವಕುಮಾರ ಮುದುಕಾ ಇತರರಿದ್ದರು. ಸುಭಾಷ ಬಿರಾದಾರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net