

ಕಾರವಾರ: ನೌಕಾನೆಲೆ ಎರಡನೇ ಹಂತದ ಯೋಜನೆಯ ಸಲುವಾಗಿ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ತಾಲೂಕಿನ ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಮುದಗಾದಲ್ಲಿ ನಡೆದಿದೆ.
ನೌಕಾನೆಲೆ ವಿಸ್ತರಣೆ ಕಾಮಗಾರಿ ನಡೆದಿದ್ದು, ಅಮದಳ್ಳಿಯಿಂದ ಮುದಗಾ ಘಟ್ಟದವರೆಗೆ ಹೆದ್ದಾರಿ ಪಕ್ಕ ಸುಮಾರು ಒಂದು ಕಿಮೀ ನೌಕಾಸೇನೆ ಕಾಂಪೌಂಡ್ ನಿರ್ವಣಕ್ಕೆ ಮುಂದಾಗಿದೆ. ಈಗಾಗಲೇ ನಡೆದಿರುವ ವಿಸ್ತರಣೆ ಕಾಮಗಾರಿಗಳಿಗಾಗಿ ಗುಡ್ಡದ ನೀರು ಸಮುದ್ರಕ್ಕೆ ಸೇರುವುದನ್ನು ತಡೆಯಲಾಗಿದೆ. ಇದರಿಂದ ಈ ಬಾರಿ ಕೃತಕ ನೆರೆ ಸೃಷ್ಟಿಯಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದಾಗಿದೆ. ಕಾಂಪೌಂಡ್ ನಿರ್ಮಾಣ ಮಾಡಿದರೆ ನೀರು ಹರಿವಿಗೆ ಸ್ವಲ್ಪವೂ ಜಾಗವಿಲ್ಲದೇ ಈ ಭಾಗದ ಸಾವಿರಾರು ಮನೆಗಳು ಮಳೆಗಾಲದಲ್ಲಿ ಮುಳುಗಲಿವೆ. ಇದರಿಂದ ತಂತಿಬೇಲಿ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಗ್ರಾಮಸ್ಥರ ಮನವಿಗೆ ಸ್ಪಂದಿಸದೇ ನೌಕಾಸೇನೆ ಅಧಿಕಾರಿಗಳು ಕಾಮಗಾರಿ ನಡೆಸಲು ಮುಂದಾಗಿದ್ದರು. ಬುಧವಾರ ನೂರಾರು ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಿದರು. ನಂತರ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.