

ಕೇಶವಮೂರ್ತಿ ವಿ.ಬಿ.,
ಹುಬ್ಬಳ್ಳಿ: ವಿಮಾನ ನಿಲ್ದಾಣದಲ್ಲಿ ಕೈತುಂಬ ಸಂಬಳ ನೀಡುವ ಉದ್ಯೋಗ ಖಾಲಿ ಇದೆ ಎಂದು ಅಂತರ್ಜಾಲದಲ್ಲಿ ನಕಲಿ ಜಾಹೀರಾತು ಸೃಷ್ಟಿಸಿ ಅಮಾಯಕ ನಿರುದ್ಯೋಗಿಗಳಿಂದ ಹಣ ಪಡೆದು ವಂಚಿಸುವ ಜಾಲ ಸಕ್ರಿಯವಾಗಿದ್ದು, ಈ ಜಾಲ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ಆಪ್ ಹಾಗೂ ಓಎಲ್ಎಕ್ಸ್, ಇಮೇಲ್ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತುರ್ತು ನೇಮಕಾತಿ ಮಾಡಲಾಗುತ್ತಿದೆ. 22,000 ದಿಂದ 72,000 ರೂ.ವರೆಗೆ ವೇತನ ನೀಡಲಾಗುವುದು. ಆಸಕ್ತರು ಈ ಕೂಡಲೇ ಸಂರ್ಪಸಿ ಎಂದು ರಾಜಾರೋಷವಾಗಿ ಜಾಹೀರಾತು ಪ್ರಕಟಿಸುತ್ತಿದ್ದಾರೆ.
ಈಗಷ್ಟೇ ಕಾಲೇಜು ವ್ಯಾಸಂಗ ಮುಗಿಸಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರು ಈ ಜಾಲಕ್ಕೆ ಸಿಕ್ಕರೆ ಸಾಕು ಸಲೀಸಾಗಿ ಬಲೆಗೆ ಬೀಳಿಸುತ್ತಾರೆ. ವಿಮಾನ ನಿಲ್ದಾಣದ ಅಧಿಕಾರಿಯ ಸೋಗಿನಲ್ಲಿ ಮಾತನಾಡಿ, ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕದ ಹೆಸರಲ್ಲಿ ಹತ್ತಾರು ಸಾವಿರ ರೂ. ಪಡೆಯುತ್ತಾರೆ.
ಕೆಲವರಿಂದ ಲಕ್ಷಾಂತರ ರೂ. ಪಡೆದಿರುವ ಪ್ರಕರಣಗಳೂ ಉಂಟು. ಆದರೆ, ವಂಚನೆಗೀಡಾದ ಯುವಕ-ಯುವತಿಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಬದಲಾಗಿ ವಿಮಾನ ನಿಲ್ದಾಣಕ್ಕೆ ಎಡತಾಕುತ್ತಿದ್ದಾರೆ. ನಿಲ್ದಾಣದ ನಿರ್ದೇಶಕರಿಗೆ ಕರೆ ಮಾಡಿ ನೋವು ತೋಡಿಕೊಳ್ಳುತ್ತಿದ್ದಾರೆ. ನಿತ್ಯವೂ ಇಂಥ ಹಲವು ಕರೆಗಳು ಬರುತ್ತಿವೆ. ಈ ಕುರಿತು ಪ್ರಾಧಿಕಾರಕ್ಕೆ ದೂರು ನೀಡಲಾಗಿದೆ ಎನ್ನುತ್ತಾರೆ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ.
ಅಧಿಕೃತ ವೆಬ್ಸೈಟ್ ಸಂಪರ್ಕಿಸಿ: ದೇಶದ ಎಲ್ಲ ವಿಮಾನ ನಿಲ್ದಾಣಗಳ ಯಾವುದೇ ಹುದ್ದೆ ನೇಮಕವಿದ್ದರೂ ಅದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕೃತ ವೆಬ್ಸೈಟ್ (www
ವಿದ್ಯಾರ್ಥಿಗಳಿಗೆ ಗಾಳ: ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಂಚಕರು ಗಾಳ ಹಾಕುತ್ತಿದ್ದಾರೆ. ವಿಮಾನ ನಿಲ್ದಾಣದ ಫೋಟೋ, ಲೊಗೋ ಬಳಸಿ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ಗಳಿಗೆ ಎಸ್ಎಂಎಸ್, ಇ-ಮೇಲ್ ಲಿಂಕ್ ಕಳುಹಿಸುವ ಮೂಲಕ ನೌಕರಿ ಹೆಸರಲ್ಲಿ ವಂಚಿಸುತ್ತಿದ್ದಾರೆ. ಈ ರೀತಿ ವಂಚಕರಿಗೆ ಆನ್ಲೈನ್ ಮೂಲಕ ಹಣ ವರ್ಗಾಯಿಸಿ ವಂಚನೆಗೀಡಾದ ಹಲವು ವಿದ್ಯಾರ್ಥಿಗಳು ಏರ್ಪೋರ್ಟ್ಗೆ ಬಂದು ವಿಚಾರಿಸಿದ ಉದಾಹರಣೆಗಳಿವೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ನೌಕರಿ ಕುರಿತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ (www.aai.aero/en) ಮೂಲಕ ಮಾತ್ರ ಮಾಹಿತಿ ನೀಡಲಾಗುತ್ತದೆ. ಉಳಿದಂತೆ ಯಾವುದೇ ಜಾಹೀರಾತು ನಂಬಬೇಡಿ. ಯಾರಾದರೂ ವಂಚನೆಗೀಡಾಗಿದ್ದರೆ, ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿ. | ಪ್ರಮೋದಕುಮಾರ ಠಾಕರೆ, ವಿಮಾನ ನಿಲ್ದಾಣ ನಿರ್ದೇಶಕ, ಹುಬ್ಬಳ್ಳಿ