ನೌಕರರು ಜವಾಬ್ದಾರಿ ಅರಿತು ಕೆಲಸ ಮಾಡಲಿ:ಜಿಲ್ಲಾಧಿಕಾರಿ ಸತ್ಯಭಾಮಾ ಸೂಚನೆ

ನೌಕರರು ಜವಾಬ್ದಾರಿ ಅರಿತು ಕೆಲಸ ಮಾಡಲಿ:ಜಿಲ್ಲಾಧಿಕಾರಿ ಸತ್ಯಭಾಮಾ ಸೂಚನೆ
Published on

ಹಾಸನ: ಸರ್ಕಾರಿ ನೌಕರರು ತಮ್ಮ ಹಕ್ಕುಗಳನ್ನು ಚಲಾಯಿಸಿ ಸೌಲಭ್ಯಗಳನ್ನು ಪಡೆಯುವುದರ ಜತೆಗೆ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕಚೇರಿಗಳಲ್ಲಿ ರಚಿಸಿರುವ ದೂರು ಸಮಿತಿಗೆ ದೂರು ನೀಡಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಸಮಿತಿಗೆ ಸಹ ದೂರು ಸಲ್ಲಿಸಬಹುದಾಗಿದೆ ಎಂದರು.
ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸಲು ಸಹಕಾರಿಯಾಗುವಂತೆ ಅಗತ್ಯ ವಿಷಯಗಳಿಗೆ ತರಬೇತಿ ಆಯೋಜಿಸುವುದು ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಲು ಯೋಗ ಶಿಬಿರಗಳನ್ನು ಆಯೋಜಿಸುವಂತೆ ಸೂಚಿಸಿದರು. ಹಾಗೆಯೇ ಜಿಲ್ಲೆಯಲ್ಲಿ ವಿಭಿನ್ನವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಿ ಸರ್ಕಾರದ ಆದೇಶಗಳ ಬಗ್ಗೆ ತಿಳಿವಳಿಕೆ ನೀಡುವುದರ ಜತೆಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ವಿವಿಧ ಯೋಜನೆಗಳ ಕುರಿತು ರಸ ಪ್ರಶ್ನೆ ಕಾರ್ಯಕ್ರಮ, ಪುನರ್ ಮನನ ಶಿಬಿರ ಹಾಗೂ ನೌಕರರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರೇರೇಪಣೆ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಅವರು ಮಾತನಾಡಿ, ಜಿಲ್ಲಾ ನೌಕರರ ಸಂಘಕ್ಕೆ ಸುಸಜ್ಜಿತವಾದ ನೌಕರರ ಭವನ ನಿರ್ಮಾಣಕ್ಕೆ ಸಿ.ಎ. ಜಾಗದಲ್ಲಿ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ, ಸರ್ಕಾರದ ಮಾರ್ಗಸೂಚಿಯಂತೆ ಹಣ ಪಾವತಿಸಿ ನೂತನ ಬಿಜಿಎಸ್‌ಕೆ ಬಡಾವಣೆಯಲ್ಲಿ ನೀಡುವುದಾಗಿ ತಿಳಿಸಿದರು.
ಜಿಲ್ಲಾ ನೌಕರರ ಕ್ರಿಡಾಕೂಟ, ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕ, ಕೆಲವು ಇಲಾಖೆಗಳ ವೇತನ ಬಟವಾಡೆಯಲ್ಲಿ ವಿಳಂಬ, ಹಾಸನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಹಲವಾರು ನೌಕರರಿಗೆ ಹಾಸನಾಂಬ ನಗರದಲ್ಲಿ ಹಂಚಿಕೆಯಾದ ಸೈಟುಗಳ ನೋಂದಣಿ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net