

ಸೇಡಂ: ಕರೊನಾದಿಂದಾಗಿ ಇಡೀ ದೇಶವೆ ಸಂಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಯಾವ ಕಂಪನಿಗಳು ನೌಕರರನ್ನು ಕೆಲಸದಿಂದ ತೆಗೆಯಬಾರದು ಎಂದು ಸರ್ಕಾರ ಆದೇಶ ನೀಡಿದೆ. ಇಷ್ಟಾದರೂ ಪಟ್ಟಣದಲ್ಲಿನ ವಾಸವದತ್ತಾ ಸಿಮೆಂಟ್ ಕಂಪನಿ 20 ನೌಕರರನ್ನು ಉದ್ಯೋಗದಿಂದ ತೆಗೆದು ಹಾಕುವ ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ ಎಂದು ವಾಸವದತ್ತಾ ಸಿಮೆಂಟ್ ಕಾರ್ಮಿಕರ ಸಂಘದ ಅಧ್ಯಕ್ಷ ಅನೀಲಕುಮಾರ ಪಾಟೀಲ್ ತೆಲ್ಕೂರ ತಿಳಿಸಿದ್ದಾರೆ.
ಲೌಕ್ಡೌನ್ ನಂತರ ಇತ್ತೀಚೆಗಷ್ಟೆ ಘಟಕ ಆರಂಭಿಸಿದ್ದು, ಇಂಜಿನಿಯರ್ ಸೇರಿ ವಿವಿಧ ಹುದ್ದೆಗಳಲ್ಲಿರುವ ಸರಿ ಸುಮಾರು 20ಜನರನ್ನು ಕರೆಸಿಕೊಂಡು ಒತ್ತಾಯವಾಗಿ ರಾಜೀನಾಮೆ ಪತ್ರ ಬರೆಸಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ. ಇದರಲ್ಲೂ ಕರ್ನಾಟಕದವರನ್ನೇ ಟಾರ್ಗೆಟ್ ಮಾಡುತ್ತಿರುವುದು ಗಮನಾರ್ಹ ಸಂಗತಿ ಎಂದು ಅವರು ಹೇಳಿದ್ದಾರೆ.ಈಗಾಗಲೇ ಆಡಳಿತ ಮಂಡಳಿ ಜತೆ ಮಾತನಾಡಿದ್ದು, ಯಾರೊಬ್ಬರನ್ನು ನೌಕರಿಯಿಂದ ತೆಗೆಯಬಾರದು ಎಂದು ಮನವಿ ಮಾಡಲಾಗಿದೆ. ರಾಜೀನಾಮೆ ವಾಪಾಸ್ ಪಡೆಯದಿದ್ದರೆ ಕಂಪನಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಕಾರ್ಖಾನೆ ಆಡಳಿತ ಮಂಡಳಿ ಜತೆ ಮಾತನಾಡಿದ್ದೇನೆ. ಕಷ್ಟ ಕಾಲದಲ್ಲಿ ನೌಕರರನ್ನು ತೆಗೆಯದಂತೆ ತಿಳಿಸಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾರನ್ನು ಕೆಲಸದಿಂದ ತೆಗೆಯದಂತೆ ಸ್ಪಷ್ಟವಾಗಿ ಆದೇಶದಲ್ಲಿ ಹೇಳಿವೆ. ಆದರೂ ತನ್ನ ಚಾಳಿ ಮುಂದುವರಿಸಿದರೆ ಕ್ರಮ ಅನಿವಾರ್ಯವಾದೀತು.
| ರಾಜಕುಮಾರ ಪಾಟೀಲ್ ತೆಲ್ಕೂರ, ಶಾಸಕ ಸೇಡಂ