ನೌಕರರ ಸಮಸ್ಯೆ ಆಲಿಕೆಗೆ ಕಚೇರಿ ಭೇಟಿ

Gandge Abhinanadana Samarambh photo
Published on

ಬೀದರ್: ರಾಜ್ಯ ಸರ್ಕಾರಿ ನೌಕರರ ಸಮಸ್ಯೆ, ಕುಂದು ಕೊರತೆಗಳ ಆಲಿಕೆಗೆ ಬರುವ ದಿನಗಳಲ್ಲಿ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಪ್ರಯುಕ್ತ ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಎಂಟು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ಸಮಸ್ಯೆ ಪರಿಹಾರ ಹಾಗೂ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ರಾಜ್ಯ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿರುವುದು ನೌಕರರ ಸೇವೆಗೆ ಇನ್ನಷ್ಟು ಹುರುಪು ಮೂಡಿಸಿದೆ ಎಂದು ತಿಳಿಸಿದರು.
ಬೀದರ್‍ನ ಸರ್ಕಾರಿ ನೌಕರರ ಭವನವನ್ನು ರಾಜ್ಯದಲ್ಲೇ ಮಾದರಿ ಮಾಡುವ ಉದ್ದೇಶ ಇದೆ. ಈಗಾಗಲೇ ಮುಂದುವರಿದ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ. ಬರುವ ದಿನಗಳಲ್ಲಿ ಭವನದಲ್ಲಿ ಹವಾ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗುವುದು ಎಂದು ಹೇಳಿದರು.
ಸಂಘದ ಹೋರಾಟದ ಫಲವಾಗಿ ಇದೇ ತಿಂಗಳಲ್ಲಿ ಸರ್ಕಾರಿ ನೌಕರರ ವೇತನ ಸಮಿತಿ ರಚನೆಯಾಗಲಿದೆ. ನೌಕರರಿಗೆ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯೂ ಜಾರಿಗೆ ಬರಲಿದೆ. ಎನ್‍ಪಿಎಸ್ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವ ದಿಸೆಯಲ್ಲಿ ಸಂಘದ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಇಲಾಖೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನೌಕರರು ಸನ್ಮಾನಿಸಿ, ಅಭಿನಂದಿಸಿರುವುದು ತಮ್ಮನ್ನು ಪುಳಕಿತಗೊಳಿಸಿದೆ. ಎಲ್ಲರ ಪ್ರೀತಿ, ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನನ್ನ ಸೇವಾ ಅವಧಿಯನ್ನು ನೌಕರರ ಸೇವೆಗೆ ಮೀಸಲಿಡಲಿದ್ದೇನೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಗಂದಗೆ ಅವರ ಪ್ರಾಮಾಣಿಕ ಸೇವೆಗೆ ರಾಜ್ಯ ಉಪಾಧ್ಯಕ್ಷ ಹುದ್ದೆ ಒಲಿದು ಬಂದಿದೆ ಎಂದು ನುಡಿದರು.
ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಮಾತನಾಡಿ, ಗಂದಗೆ ಅವರು ಸಂಘದ ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಮಾದರಿಯಾಗಿದ್ದಾರೆ. ಸಂಘದ ಜತೆಗೆ ಅವರು ಇತರ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರೀಯರಾಗಿರುವುದು ಪ್ರಶಂಸನೀಯ ಎಂದು ಹೇಳಿದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಸವರಾಜ ಜಕ್ಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ್ ಪಾಟೀಲ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶೇಕ್ ಮಹೆಬೂಬ್, ಸರ್ಕಾರಿ ನೌಕರರ ವಿವಿಧ ಸಂಘ ಸಂಸ್ಥೆಗಳ ಭೀಮರಾವ್ ಹಡಪದ, ಓಂಕಾಂತ ಸೂರ್ಯವಂಶಿ, ಸಂಜುಕುಮಾರ ಸೂರ್ಯವಂಶಿ, ಸಾರಿಕಾ ಗಂಗಾ, ಪ್ರಶಾಂತ ರಾಗಾ, ಶಿವರಾಜ ಕಪಲಾಪುರೆ, ಸಂಗಶೆಟ್ಟಿ ಹಲಬುರ್ಗೆ, ಶಿವಕುಮಾರ ಗುಮ್ಮಾ, ಶಿವಾನಂದ ಪಾಟೀಲ, ರವಿ ಪಾಂಚಾಳ, ಪೀಟರ್ ಸೈಮನ್, ವಿಷ್ಣುಕಾಂತ ಠಾಕೂರ್, ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಓಂಕಾರ ಮಲ್ಲಿಗೆ, ಡಾ. ವೈಶಾಲಿ ದೇವಪ್ಪ, ಪಾಂಡುರಂಗ ಬೆಲ್ದಾರ್, ಸಿದ್ದಮ್ಮ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜಪ್ಪ ಪಾಟೀಲ, ನಾಗಶೆಟ್ಟಿ ಡುಮಣೆ, ಶಿವಕುಮಾರ ಘಾಟೆ, ರಾಜಕುಮಾರ ಬೇಲೂರೆ, ಲಿಂಗಾನಂದ ಮಹಾಜನ್, ಭೀಮಾಶಂಕರ ಆದೆಪ್ಪ, ಮಲ್ಲಿಕಾರ್ಜುನ ಮೇತ್ರೆ ಇದ್ದರು.
ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ಬಕ್ಕಪ್ಪ ನಿರ್ಣಾಕರ್ ಸ್ವಾಗತಿಸಿದರು. ಮನೋಹರ ಕಾಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net