ನೌಕರರ ಸಂಘದಿಂದ ಸರ್ಕಾರಿ ಶಾಲೆ ದತ್ತು

Gandge Abhinandane
Published on

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಶೈಕ್ಷಣಿಕ ಏಳಿಗೆಗಾಗಿ ಜಿಲ್ಲೆಯ ಎಂಟೂ ತಾಲ್ಲೂಕುಗಳಲ್ಲಿ ತಲಾ ಎರಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಪ್ರಯುಕ್ತ ರಾಷ್ಟ್ರೀಯ ಬಸವ ದಳ ಹಾಗೂ ಜಿಲ್ಲಾ ಲಿಂಗಾಯತ ಸಮಾಜದ ವತಿಯಿಂದ ಇಲ್ಲಿಯ ಬಸವ ಮಂಟಪದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ನುರಿತ, ಅನುಭವಿ ಶಿಕ್ಷಕರಿಂದ ವಿಷಯವಾರು ತರಬೇತಿ ಕೊಡಿಸಲಾಗುವುದು. ಶಾಲೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆಯುವ ದಿಸೆಯಲ್ಲಿ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು. ಸಂಪನ್ಮೂಲ ವ್ಯಕ್ತಿಗಳಿಂದ ಕೆಎಫ್‍ಸಿ, ಕೆಸಿಎಸ್‍ಆರ್ ನಿಯಮಾವಳಿ, ಮಾಹಿತಿ ಹಕ್ಕು ಕಾಯ್ದೆ, ಒತ್ತಡ ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಬಸವಕಲ್ಯಾಣದ ಬಸವ ಮಹಾಮನೆಯ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಗುರು ಪೂಜೆ ನೆರವೇರಿಸಿದರು. ಬಸವ ದಳದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಜೊನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ರೂವಾರಿಯಾದ ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ನೇತೃತ್ವ ವಹಿಸಿದ್ದರು.
ಬಸವ ದಳದ ತೆಲಂಗಾಣ ರಾಜ್ಯ ಅಧ್ಯಕ್ಷ ಶಂಕರೆಪ್ಪ ಪಾಟೀಲ, ಬೀದರ್ ತಾಲ್ಲೂಕು ಅಧ್ಯಕ್ಷ ಸಂಜುಕುಮಾರ ಪಾಟೀಲ, ಡಾ. ಮಹೇಶ ಬಿರಾದಾರ, ಶ್ರೀಕಾಂತ ಭೋರಾಳೆ, ಶಿವಶರಣಪ್ಪ ವಲ್ಲೇಪುರೆ, ಬಸವರಾಜ ಪಾಟೀಲ ಶಿವಪುರ, ಬಸವರಾಜ ಜಕ್ಕಾ, ರಾಜಶೇಖರ ಮಂಗಲಗಿ, ರಾಜಕುಮಾರ ಬೇಲೂರೆ ಇದ್ದರು.
ಕಂಟೆಪ್ಪ ಗಂದಿಗುಡೆ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಅಲ್ಲಮಪ್ರಭು ಬಡಾವಣೆಯ ಮಹಿಳಾ ಕೋಲಾಟ ತಂಡದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ರವಿ ಪಾಪಡೆ ಸ್ವಾಗತಿಸಿದರು. ಸಿದ್ರಾಮ ಶೆಟಕಾರ್ ನಿರೂಪಿಸಿದರು. ವಿಶ್ವನಾಥ ಉದಗಿರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net